ವಿವಾದಿತ ಮಾಧ್ಯಮ ಉದ್ಯಮಿಯ ಕೊಲೆ ನಡೆದ ತಿಂಗಳೊಳಗೆ ಭಾರತದ ಗಡಿ ಪ್ರದೇಶದ ಸಮೀಪ ಅಶಾಂತಿಯ ನೆಲೆವೀಡಾಗಿರುವ ನೇಪಾಳದ ಉತ್ತರ ಭಾಗದಲ್ಲಿ ಭಾರತೀಯ ಮೂಲದ ಪತ್ರಿಕೋದ್ಯಮಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆಗೈದಿದ್ದಾನೆ.
ದಕ್ಷಿಣ ನೇಪಾಳದಿಂದ ಪ್ರಕಟವಾಗುವ ನೇಪಾಳದ ದಿನಪತ್ರಿಕೆ 'ಜನಕಪುರ ಟುಡೇ' ಪತ್ರಿಕೆಯ ಪ್ರಕಾಶಕರಾಗಿರುವ 50ರ ಹರೆಯದ ಅರುಣ್ ಸಿಂಘಾನಿಯಾ ಎಂಬವರನ್ನು ತೆರಾಯ್ ಪ್ರಾಂತ್ಯದಲ್ಲಿ ಹೋಳಿ ಸಂಭ್ರಮ ನಡೆದ ನಂತರ ಮನೆಗೆ ಮರಳುತ್ತಿರುವ ಸಂದರ್ಭದಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಎರಡು ಬೈಕುಗಳಲ್ಲಿ ಅವರನ್ನು ಅಡ್ಡ ಹಾಕಿದ ಅಪರಿಚಿತ ಕೊಲೆಗಾರರು ಹತ್ತಿರದಿಂದ ಬಂದೂಕಿನಿಂದ ಗುಂಡಿಕ್ಕಿದ್ದಾರೆ. ಸಿಂಘಾನಿಯಾ ಅವರ ದೇಹಕ್ಕೆ ಮೂರು ಗುಂಡುಗಳು ತೂರಿವೆ ಎಂದು ಪೊಲೀಸರು ಹೇಳಿದ್ದಾರೆ.
ಈ ಹತ್ಯೆಯನ್ನು ಖಂಡಿಸಿ ಜನಕಪುರ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟಗಳು ಮಂಗಳವಾರ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ಜನಜೀವನ ಅಸ್ತವ್ಯಸ್ತವಾಗಿತ್ತು.
ನೇಪಾಳ ಪತ್ರಕರ್ತರ ಒಕ್ಕೂಟವೂ ಈ ಹತ್ಯೆಯನ್ನು ತೀವ್ರವಾಗಿ ಖಂಡಿಸಿವೆ. ಅಲ್ಲದೆ ಇದನ್ನು ಖಂಡಿಸಿ ನಾವು ಪ್ರತಿಭಟನೆ ನಡೆಸಲಿದ್ದು, ಆರೋಪಿಗಳನ್ನು ಬಂಧಿಸಬೇಕು ಮತ್ತು ನೇಪಾಳದ ಮಾಧ್ಯಮಗಳಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸುತ್ತೇವೆ ಎಂದು ಸಂಘಟನೆ ತಿಳಿಸಿದೆ.
ಸಿಂಘಾನಿಯಾ ಅವರ ಮಾಧ್ಯಮ ಸಮೂಹವು ಒಂದು ಎಫ್ಎಂ ರೇಡಿಯೋ ಕೇಂದ್ರ, ಒಂದು ಇಂಟರ್ನೆಟ್ ನ್ಯೂಸ್ ಪೋರ್ಟಲ್ ಕೂಡ ನಡೆಸುತ್ತಿದ್ದ ಅವರು ಭಾನುವಾರವಷ್ಟೇ ಭಾರತ ಪ್ರವಾಸ ಮುಗಿಸಿ ವಾಪಸಾಗಿದ್ದರು.
ವರದಿಗಳ ಪ್ರಕಾರ ಅವರು ಕೊನೆಯ ಬಾರಿ ದೂರವಾಣಿ ಕರೆ ಮಾಡಿದ್ದು ದೆಹಲಿಯಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿರುವ ತನ್ನ ಪುತ್ರ ರಾಹುಲ್‌ಗೆ. ಸೋಮವಾರ ಸಂಜೆ 6.30ರ ಹೊತ್ತಿಗೆ ಸಿಂಘಾನಿಯಾ ಮೇಲೆ ದಾಳಿ ನಡೆದಿದೆ. ಹೋಳಿ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದಾಗ ದುಷ್ಕೃತ್ಯ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.