ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದನೆ ಇಸ್ಲಾಂ ವಿರೋಧಿ: ಮುಸ್ಲಿಂ ವಿದ್ವಾಂಸರಿಂದ ಫತ್ವಾ (Muslim | fatwa | terrorism | Dr Muhammad Tahir-ul-Qadri)
Bookmark and Share Feedback Print
 
ಅಲ್‌ಖೈದಾದ ಹಿಂಸಾತ್ಮಕ ಸಿದ್ಧಾಂತಕ್ಕೆ ನೇರ ಸವಾಲು ಹಾಕಿರುವ ಬ್ರಿಟನ್ ಮುಸ್ಲಿಂ ವಿದ್ವಾಂಸರೊಬ್ಬರು ಜಾಗತಿಕ ಭಯೋತ್ಪಾದನೆ ಮತ್ತು ಆತ್ಮಹತ್ಯಾ ಬಾಂಬ್ ದಾಳಿಗಳನ್ನು ತೀವ್ರವಾಗಿ ಖಂಡಿಸಿದ್ದು, ಇವುಗಳ ವಿರುದ್ಧ ಫತ್ವಾ ಹೊರಡಿಸಿದ್ದಾರೆ.

ಲಂಡನ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಾಗತಿಕ ಚಳವಳಿ 'ಮಿನ್‌ಹಾಜ್-ಉಲ್-ಕುರಾನ್' ಸಂಸ್ಥಾಪಕ ಪಾಕಿಸ್ತಾನ ಸಂಜಾತ ಬ್ರಿಟನ್ ಪ್ರಜೆ ಮುಹಮ್ಮದ್ ತಾಹಿರ್ ಉಲ್ ಖಾದ್ರಿ ಎಂಬವರು ಫತ್ವಾ ಜಾರಿಗೊಳಿಸಿರುವುದನ್ನು ಪ್ರಕಟಿಸಿದ್ದಾರೆ.

ನಾಗರಿಕರ ಮೇಲೆ ಆತ್ಮಹತ್ಯಾ ಬಾಂಬ್‌ ದಾಳಿ ಅಥವಾ ಯಾವುದೇ ರೀತಿಯ ದಾಳಿಗಳನ್ನು ನಡೆಸುವುದು ಇಸ್ಲಾಂ ಪ್ರಕಾರ ನಿಷಿದ್ಧ ಮಾತ್ರವಲ್ಲ, ಇಂತಹ ಕುಕೃತ್ಯಗಳನ್ನು ಎಸಗುವವರು ಇಸ್ಲಾಮ್‌ನಿಂದ ಸಂಪೂರ್ಣವಾಗಿ ಹೊರತಾದವರು; ಮತ್ತೊಂದು ಪ್ರಕಾರದಲ್ಲಿ ಹೇಳುವುದಾದರೆ ಅವರು ಧಾರ್ಮಿಕ ನಂಬಿಕೆ (ಅನಿಸ್ಲಾಮಿಕರು) ಇಲ್ಲದವರು, ಧರ್ಮವಿರೋಧಿಗಳು ಎಂದು ಸುಮಾರು 600 ಪುಟಗಳ ಫತ್ವಾದಲ್ಲಿ ಖಾದ್ರಿ ಬಣ್ಣಿಸಿದ್ದಾರೆ.

ಅಲ್ಲದೆ ಅಲ್‌ಖೈದಾ ಹೋರಾಟವನ್ನು 'ಹೊಸ ಸೋಗಿನೊಂದಿಗಿರುವ ಹಳೆಯ ಪಾಪಿ' ಎಂದು ಜರೆದಿರುವ ಖಾದ್ರಿ, ಬ್ರಿಟನ್‌ನಲ್ಲಿನ ಬಹುತೇಕ ಮುಸ್ಲಿಂ ಯುವಕರನ್ನು ಇನ್ನೂ ಸಂಪೂರ್ಣವಾಗಿ ತೀವ್ರವಾದಿಗಳನ್ನಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ ಎಂದು ತಾನು ನಂಬಿದ್ದೇನೆ ಎಂದಿದ್ದಾರೆ.

ಈಗಾಗಲೇ ಭಯೋತ್ಪಾದಕಾ ಸಂಘಟನೆಗಳನ್ನು ಸೇರಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿರುವವರು ಸಂಪೂರ್ಣವಾಗಿ ಬ್ರೈನ್‌ವಾಶ್‌ಗೊಳಗಾದವರು, ಅವರು ನಮ್ಮ ಮಾತನ್ನು ಕೇಳಲಾರರು. ಆದರೆ ಉಳಿದವರ ಮನಸ್ಸಿನಲ್ಲಿ ಸಂಶಯದ ಬೀಜಗಳು ಹುಟ್ಟಿಕೊಳ್ಳಲಿವೆ. ಅವರು ಬದಲಾಗುವ ನಿರೀಕ್ಷೆ ನನ್ನದು ಎಂದು ಖಾದ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದಕರು ಅಂದುಕೊಂಡಂತೆ ಆತ್ಮಹತ್ಯಾ ದಾಳಿಗಳನ್ನು ನಡೆಸಿ ಬಲಿಯಾದರೆ ಅದು ಹುತಾತ್ಮ ಎನ್ನುವ ಪಟ್ಟಕ್ಕೆ ಏರಿಸಿದಂತಾಗುವುದಿಲ್ಲ. ಅವರು ಮುಸ್ಲಿಮರ ಪ್ರಕಾರ ಹೀರೋಗಳಾಗುವುದಿಲ್ಲ, ಬದಲಿಗೆ ನರಕದ ನಾಯಕರುಗಳಾಗುತ್ತಾರೆ. ಅವರು ನೇರವಾಗಿ ನರಕಕ್ಕೇ ಹೋಗುತ್ತಾರೆ ಎಂದರು.

ನೀವು ರಾತ್ರೋರಾತ್ರಿ ಒಬ್ಬ ಭಯೋತ್ಪಾದಕನಾಗಲು ಸಾಧ್ಯವಿಲ್ಲ. ಇದೊಂದು ದೊಡ್ಡ ಪ್ರಯಾಣ. ಹಲವರು ಈಗಾಗಲೇ ಈ ಹಾದಿಯಲ್ಲಿದ್ದಾರೆ. ಆದರೆ ಅವರಿನ್ನೂ ಆತ್ಮಹತ್ಯಾ ಬಾಂಬರುಗಳ ದಾರಿಯನ್ನು ಮುಟ್ಟಿಲ್ಲ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ಖಾದ್ರಿ ತಿಳಿಸಿದ್ದಾರೆ.

ಈ ಬಗ್ಗೆ ಮಿನಹಾಜ್ ಉಲ್ ಕುರಾನ್ ಸಂಘಟನೆಯ ವಕ್ತಾರ ಶಾಹಿದ್ ಮುರ್ಸಾಲೀನ್ ಪ್ರತಿಕ್ರಿಯೆ ನೀಡಿದ್ದು, 'ಆತ್ಮಹತ್ಯಾ ಬಾಂಬರುಗಳನ್ನು ಹುತಾತ್ಮರು ಎಂದು ಇಸ್ಲಾಂ ರಕ್ಷಿಸುತ್ತದೆ ಎಂದು ಹೇಳುವ ಭಯೋತ್ಪಾದಕರ ಮೇಲೆ ಖಾದ್ರಿಯವರು ಪ್ರಹಾರ ನಡೆಸಿದ್ದಾರೆ. ಈ ಫತ್ವಾದಿಂದಾಗಿ ಆತ್ಮಹತ್ಯಾ ಬಾಂಬರುಗಳ ಮನಸ್ಸಿನಲ್ಲಿರುವ ತತ್ವಗಳ ಬಗ್ಗೆ ಸಂದೇಹಗಳು ಹುಟ್ಟಿಕೊಳ್ಳಲಿವೆ' ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ