ತಾಲಿಬಾನ್ ದಾಳಿ ನೇರ ಪ್ರಸಾರಕ್ಕೆ ನಿಷೇಧ: ಅಫ್ಘಾನ್ ಚಿಂತನೆ
ಕಾಬೂಲ್, ಬುಧವಾರ, 3 ಮಾರ್ಚ್ 2010( 15:48 IST )
ತಾಲಿಬಾನ್ ದಾಳಿಗಳ ಸಂದರ್ಭಗಳಲ್ಲಿ ದಾಳಿಕೋರರಿಗೆ ನಿರ್ದೇಶನ ನೀಡಲು ಟಿವಿ ಮಾಧ್ಯಮಗಳ ನೇರ ಪ್ರಸಾರವನ್ನು ಬಳಸಿಕೊಳ್ಳುತ್ತಿರುವುದು ಖಾತ್ರಿಯಾಗಿರುವ ಹಿನ್ನೆಲೆಯಲ್ಲಿ ನೇರ ಪ್ರಸಾರವನ್ನು ನಿಷೇಧಿಸುವ ಕುರಿತು ಸರಕಾರ ಚಿಂತಿಸುತ್ತಿದೆ ಎಂದು ಅಫಘಾನಿಸ್ತಾನ ಅಧ್ಯಕ್ಷರ ವಕ್ತಾರ ತಿಳಿಸಿದ್ದಾರೆ.
ಕಾಬೂಲ್ ಹೃದಯಭಾಗದ ಎರಡು ಅತಿಥಿ ಗೃಹಗಳ ಮೇಲೆ ತಾಲಿಬಾನ್ ಭಯೋತ್ಪಾದಕರು ಆತ್ಮಹತ್ಯಾ ದಾಳಿ ನಡೆಸಿ 11 ಭಾರತೀಯರೂ ಸೇರಿದಂತೆ 17 ಮಂದಿಯ ಸಾವಿಗೆ ಕಾರಣವಾದ ಘಟನೆ ನಡೆದ ನಾಲ್ಕು ದಿನಗಳ ನಂತರ ಸರಕಾರ ಈ ಪ್ರತಿಕ್ರಿಯೆ ನೀಡಿದೆ.
ದಾಳಿ ನಡೆಯುತ್ತಿರುವ ನೇರ ಪ್ರಸಾರದ ದೃಶ್ಯಗಳನ್ನು ಬಳಸಿಕೊಂಡು ದಾಳಿಕೋರರಿಗೆ ಅಡಗುದಾಣಗಳಿಂದ ಭಯೋತ್ಪಾದಕರು ನಿರ್ದೇಶನ ನೀಡಿರುವುದು ಗಮನಕ್ಕೆ ಬಂದಿದೆ ಎಂದು ಅಧ್ಯಕ್ಷ ಹಮೀದ್ ಕರ್ಜೈ ಅವರ ಮುಖ್ಯ ವಕ್ತಾರ ವಹೀದ್ ಒಮರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹಾಗಾಗಿ ಇಲ್ಲಿ ಎರಡು ವಿಚಾರಗಳನ್ನು ನಾವು ಸ್ಪಷ್ಟಪಡಿಸಲು ಬಯಸುತ್ತಿದ್ದೇವೆ. ಪತ್ರಕರ್ತರ ಜೀವಹಾನಿಯಾಗದಂತೆ ರಕ್ಷಿಸುವುದು ಮತ್ತು ನೇರ ಪ್ರಸಾರವನ್ನು ಬಳಸಿ ವೈರಿಗಳು ನಮ್ಮ ಕೌಶಲ್ಯಗಳನ್ನು ವಿಫಲಗೊಳಿಸುವುದು ಅಥವಾ ಅವರ ಜನರಿಗೆ ಅದನ್ನು ಬಳಸಿ ನಿರ್ದೇಶನಗಳನ್ನು ನೀಡುವಂತಾಗಬಾರದು. ಇದರಿಂದಾಗಿ ನಮ್ಮ ಭದ್ರತಾ ಪಡೆಗಳ ಸಾಮರ್ಥ್ಯ ಕುಗ್ಗುವುದಷ್ಟೇ ಅಲ್ಲ, ನಾಗರಿಕರು ಮತ್ತು ಪತ್ರಕರ್ತರಿಗೂ ಹಾನಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದು ಜಾರಿಯಾದಲ್ಲಿ ಅಫಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ಭಯೋತ್ಪಾದಕ ದಾಳಿಗಳ ನೇರ ಪ್ರಸಾರ ಮಾಡುವಂತಿಲ್ಲ. ಆದರೆ ಇದನ್ನು ತೀವ್ರವಾಗಿ ವಿರೋಧಿಸಿರುವ ಅಫಘಾನಿಸ್ತಾನ ಸರಕಾರದ ಪ್ರಮುಖ ಪೋಷಕ ಅಮೆರಿಕಾ, ಮಾಧ್ಯಮಗಳನ್ನು ನಿರ್ಬಂಧಿಸಿರುವುದನ್ನು ತಾನು ಆಕ್ಷೇಪಿಸುವುದಾಗಿ ತಿಳಿಸಿದೆ.
ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವ ಸರಕಾರದ ಪ್ರಸ್ತಾಪವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಮಾಧ್ಯಮಗಳಿಗೆ ಮುಕ್ತ ವಾತಾವರಣದ ಅಗತ್ಯವಿದೆ ಎಂದು ಅಫಘಾನಿಸ್ತಾನ ಮತ್ತು ಪಾಕಿಸ್ತಾನಗಳ ಅಮೆರಿಕಾದ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್ಬೂರ್ಕ್ ಹೇಳಿದ್ದಾರೆ.