ಸಂಬಂಧಪಟ್ಟವರಿಗೆ ಸತತ ಮನವಿಗಳನ್ನು ಮಾಡಿಕೊಂಡಿರುವ ಹೊರತಾಗಿಯೂ ಗುರುದ್ವಾರವೊಂದರ ನಿಯಂತ್ರಣವನ್ನು ಪೇಶಾವರ ಆಡಳಿತವು ನಮಗೆ ನೀಡುತ್ತಿಲ್ಲ ಎಂದು ಪಾಕಿಸ್ತಾನದ ವಾಯುವ್ಯ ನಗರದ ಸಿಖ್ ಸಮುದಾಯ ಇಂದು ದೂರಿಕೊಂಡಿದೆ.
ಭಕ್ತಾದಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿದ್ದು, ನಗರದಲ್ಲಿನ ಮತ್ತೊಂದು ಪ್ರಾರ್ಥನಾ ಸಭಾಂಗಣದಲ್ಲಿ ಪದೇಪದೇ ಭಾರೀ ಜನದಟ್ಟಣೆಯ ತೊಂದರೆ ಎದುರಾಗುತ್ತಿರುವುದರಿಂದ ಜೋಗಿವಾರದಲ್ಲಿನ ಗುರುದ್ವಾರದ ನಿಯಂತ್ರಣವನ್ನು ನೀಡುವಂತೆ ಸಿಖ್ ಸಮುದಾಯದ ನಾಯಕರು ಮನವಿ ಮಾಡಿಕೊಂಡಿದ್ದರು.
ಜಿಲ್ಲಾ ಆಡಳಿತಕ್ಕೆ ವಾಸ್ತವಾಂಶದ ಬಗ್ಗೆ ಸಾಕಷ್ಟು ಬಾರಿ ಅರ್ಜಿಗಳನ್ನು ನೀಡಿರುವ ಹೊರತಾಗಿಯೂ ಜೋಗಿವಾರದ ಗುರುದ್ವಾರದ ನಿಯಂತ್ರಣವನ್ನು ಕಳೆದ ಏಳು ವರ್ಷಗಳಿಂದ ನಮಗೆ ನೀಡಲಾಗಿಲ್ಲ ಎಂದು ಪೇಶಾವರ ಜಿಲ್ಲಾ ಸರಕಾರದ ಮಾಜಿ ಸದಸ್ಯ ಸಾಹಿಬ್ ಸಿಂಗ್ ಹೇಳಿದ್ದಾರೆ.
ಸರಕಾರವು ನಮಗೆ ಅದನ್ನು ಹಸ್ತಾಂತರಿಸಿದಲ್ಲಿ ಉಳಿದ ಕೆಲಸಗಳನ್ನು ನಾವು ನೋಡಿಕೊಳ್ಳುತ್ತೇವೆ. ನಮ್ಮದೇ ಸ್ವಂತ ಹಣದಲ್ಲಿ ಅದರ ದುರಸ್ತಿ ಕಾರ್ಯವನ್ನು ನಾವು ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಮೊಹಲ್ಲಾಹ್ ಜಗನ್ ಶಾಹ್‌ನಲ್ಲಿನ ಕೇಂದ್ರ ಭಾಯಿ ಜೋಗಾ ಸಿಂಗ್ ಗುರುದ್ವಾರಕ್ಕೆ ನೂರಾರು ಸಿಖ್ಖರು ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲು ದಿನಾರಾತ್ರಿ ಭೇಟಿ ನೀಡಿದ್ದಾರೆ.
ಸಿಖ್ ಸಮುದಾಯದ ಜನಸಂಖ್ಯೆಯಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡು ಬಂದಿರುವುದರಿಂದ ಗುರುದ್ವಾರಗಳಲ್ಲಿ ಸಮಸ್ಯೆಯಾಗಿದೆ ಎಂದು ಹಿರಿಯ ಸಿಖ್ ವ್ಯಕ್ತಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.