ಪಾಕ್ ನಿರ್ಲಕ್ಷ್ಯ; ಜಮಾತ್ ಉದ್ ದಾವಾಕ್ಕೆ ನಿಷೇಧ ಲೆಕ್ಕಕ್ಕಿಲ್ಲ
ಲಾಹೋರ್, ಗುರುವಾರ, 4 ಮಾರ್ಚ್ 2010( 15:40 IST )
ಜಾಗತಿಕ ಭಯೋತ್ಪಾದಕ ಸಂಘಟನೆ 'ಲಷ್ಕರ್ ಇ ತೋಯ್ಬಾ'ದ ರೆಂಬೆ ಎಂದೇ ಗುರುತಿಸಿಕೊಳ್ಳುವ 'ಜಮಾತ್ ಉದ್ ದಾವಾ' ಮೇಲೆ ವಿಶ್ವಸಂಸ್ಥೆ ನಿಷೇಧ ಹೇರಿರುವ ಹೊರತಾಗಿಯೂ ಪಾಕಿಸ್ತಾನದಲ್ಲಿ ಇದರ ಕಚೇರಿ ಎಗ್ಗಿಲ್ಲದೆ ಕಾರ್ಯಾರಿಸುತ್ತಿರುವುದು ಬಹಿರಂಗವಾಗಿದೆ.
2008ರ ಡಿಸೆಂಬರ್‌ನಲ್ಲಿ ಪಾಕಿಸ್ತಾನ ಮೂಲದ ಜಮಾತ್ ಉದ್ ದಾವಾ ಮೇಲೆ ವಿಶ್ವಸಂಸ್ಥೆ ನಿಷೇಧ ಹೇರಿದ ನಂತರ ಈ ಸಂಘಟನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಸ್ಲಾಮಾಬಾದ್ ಭರವಸೆ ನೀಡಿತ್ತು. ಅದರ ಎಲ್ಲಾ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತೇನೆ ಎಂದೂ ಹೇಳಿತ್ತು. ಆದರೆ ಅದು ಸ್ವಲ್ಪವೇ ದಿನಗಳಲ್ಲಿ ಹುಸಿಯಾಗಿದ್ದು, ಸಂಘಟನೆ ಮತ್ತೆ ತಲೆಯೆತ್ತಿದೆ.
ಜಮಾತ್ ಉದ್ ದಾವಾ ಕಚೇರಿಗಳ ಮೇಲೆ ದಾಳಿ ಮಾಡಿ, ಅದರ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡ 14 ತಿಂಗಳುಗಳ ಬಳಿಕ ಪಾಕಿಸ್ತಾನ ಸರಕಾರದ ಮತ್ತೊಂದು ಮುಖ ಬಹಿರಂಗ ಮಾಡಿದ್ದು ಭಾರತ ವಾರ್ತಾವಾಹಿನಿ 'ಹೆಡ್‌ಲೈನ್ಸ್ ಟುಡೇ'.
ಈ ವಾರ್ತಾವಾಹಿನಿಯ ತನಿಖಾ ತಂಡವು ನಿಷೇಧಿತ ಸಂಘಟನೆಯ ಪ್ರಧಾನ ಕಚೇರಿಯನ್ನು ಪ್ರವೇಶಿಸುವ ಮೂಲಕ ಮೊತ್ತ ಮೊದಲ ಬಾರಿ ಭಾರತೀಯ ಟಿವಿ ತಂಡವೊಂದು ಇದರ ಸಾಕ್ಷ್ಯ ವರದಿ ಮಾಡಿದ ಹೆಗ್ಗಳಿಕೆಗೊಳಗಾಗಿದೆ.
ಈ ತನಿಖಾ ವರದಿಯ ಪ್ರಕಾರ ಪಾಕಿಸ್ತಾನವು ತನ್ನೆಲ್ಲಾ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಗಾಳಿಗೆ ತೂರಿರುವುದು ಗೋಚರಿಸುತ್ತದೆ. ಜಮಾತ್ ಉದ್ ದಾವಾ ಎಂದು ಉರ್ದು ಭಾಷೆಯಲ್ಲಿ ಬರೆಯಲಾಗಿರುವ ದೊಡ್ಡ ಬೋರ್ಡಿನ ಹತ್ತಿರದ ಗೇಟಿನ ಬಳಿ ಎಕೆ ರೈಫಲ್ (ಎಕೆ 47 ಸರಣಿಯ) ಹಿಡಿದುಕೊಂಡಿರುವ ವ್ಯಕ್ತಿಯೊಬ್ಬನ ವೀಡಿಯೋ ತುಣುಕನ್ನು ಕೂಡ ವಾಹಿನಿ ಪ್ರಸಾರ ಮಾಡಿದೆ.
ಪಾಕಿಸ್ತಾನದ ಎರಡನೇ ಅತಿ ದೊಡ್ಡ ನಗರ ಲಾಹೋರ್‌ನಿಂದ 30 ಕಿಲೋ ಮೀಟರ್ ದೂರದಲ್ಲಿರುವ ಮುರಿಡ್ಕೆ ಎಂಬ ನಗರದಲ್ಲಿದೆ ಜಮಾತ್ ಉದ್ ದಾವಾ ಸಂಘಟನೆಯ ಈ ಪ್ರಮುಖ ಅಡ್ಡೆ. ಇದೇನೂ ಕದ್ದು ಮುಚ್ಚಿ ಕಾರ್ಯಾಚರಿಸುತ್ತಿಲ್ಲ. ಇದರ ಮಾತೃಸಂಸ್ಥೆ ಲಷ್ಕರ್ ಇ ತೋಯ್ಬಾದ ಕಚೇರಿಯೂ ಇಲ್ಲೇ ಇದೆ.
2008ರ ಮುಂಬೈ ದಾಳಿಯಲ್ಲಿ ಬದುಕುಳಿದಿರುವ ಏಕೈಕ ಭಯೋತ್ಪಾದಕ ಅಜ್ಮಲ್ ಕಸಬ್ ಸೇರಿದಂತೆ ಸಾಕಷ್ಟು ಭಯೋತ್ಪಾದಕರನ್ನು ಹಫೀಜ್ ಸಯೀದ್ ಮುಂದಾಳುತ್ವದಲ್ಲಿ ತಯಾರು ಮಾಡುತ್ತಿರುವ ಈ ಜಿಹಾದ್ ಫ್ಯಾಕ್ಟರಿ ಮುರಿಡ್ಕಿಯಲ್ಲೇ ಇದೆ ಎಂಬುದು ಜಗತ್ತಿಗೇ ತಿಳಿದ ವಿಚಾರವಾಗಿದ್ದರೂ, ಪಾಕಿಸ್ತಾನ ಈ ವಿಷಯದಲ್ಲಿ ಮೌನವನ್ನು ಮುಂದುವರಿಸಿದೆ.
ಮುರಿಡ್ಕೆಯಲ್ಲಿ ಸುಮಾರು 75 ಎಕರೆ ವ್ಯಾಪ್ತಿಯಲ್ಲಿ ಜಮಾತ್ ಉದ್ ದಾವಾ ತನ್ನ ಕಚೇರಿ ಹೊಂದಿದೆ. ಇದನ್ನು ಮುಚ್ಚುತ್ತೇನೆ ಎಂದು ಪಾಕಿಸ್ತಾನ ಸರಕಾರ ಹೇಳಿಕೊಂಡಿತ್ತಾದರೂ, ಇನ್ನೂ ಕಾರ್ಯಗತಗೊಳಿಸಲಾಗಿಲ್ಲ.
ಈ ನಡುವೆ ತಾವು ಲಷ್ಕರ್ ಸಿದ್ಧಾಂತವನ್ನು ಬೆಂಬಲಿಸುತ್ತಿರುವುದನ್ನು ಜಮಾತ್ ಉದ್ ದಾವಾ ವಕ್ತಾರ ಯಾಹ್ಯಾ ಮುಜಾಹಿದ್ ಒಪ್ಪಿಕೊಂಡಿದ್ದಾನೆ. ನಾವು ಲಷ್ಕರ್ ಇ ತೋಯ್ಬಾದ ತತ್ವಗಳನ್ನು ಬೆಂಬಲಿಸುತ್ತಿದ್ದೇವೆ. ಇದನ್ನೇ ಮುಂದುವರಿಸುತ್ತೇವೆ. ಭಾರತವು ಕಾಶ್ಮರವನ್ನು ಮುಕ್ತಗೊಳಿಸಬೇಕು ಎನ್ನುವುದು ನಮ್ಮ ಬೇಡಿಕೆ ಎಂದು ತಿಳಿಸಿದ್ದಾನೆ.
ಸರಕಾರ ಏನು ಮಾಡುವಂತಿಲ್ಲ... ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುರಿಡ್ಕೆ ಮುಖ್ಯ ಆಡಳಿತಗಾರ ಖಖಾನ್ ಬಾಬರ್, 2009ರ ಜನವರಿಯಲ್ಲಿ ಅಲ್ಲಿಗೆ ದಾಳಿ ನಡೆಸಿದಾಗ ಅಲ್ಲಿ ಸಾವಿರಾರು ಜಮಾತ್ ಉದ್ ದಾವಾ ಕಾರ್ಯಕರ್ತರು ಕೆಲಸ ಮಾಡುತ್ತಿದ್ದರು. ಒಮ್ಮಿಂದೊಮ್ಮೆಲೆ ಇದನ್ನು ಸ್ಥಗಿತಗೊಳಿಸುವುದು ಸರಕಾರಕ್ಕೂ ಅಸಾಧ್ಯ ಎಂದಿದ್ದಾರೆ.