ಟಿಬೆಟ್‌ನ ಧಾರ್ಮಿಕ ಮುಖಂಡ ದಲೈ ಲಾಮಾ ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದನ್ನು ಕಟುವಾಗಿ ಟೀಕಿಸಿರುವ ಚೀನಾ, ಲಾಮಾ ಅವರೊಬ್ಬ 'ರಾಜಕೀಯ ಬೌದ್ಧಗುರು' ಎಂದು ಗುರುವಾರ ಲೇವಡಿ ಮಾಡಿದೆ.
ಚೀನಾದ ಹಿರಿಯ ಅಧಿಕಾರಿಯಾಗಿರುವ ಲಿ ಜಾವೋಕ್ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿರುವ ಕ್ಸಿನ್‌ಹುವಾ ನ್ಯೂಸ್ ಏಜೆನ್ಸಿ, ಕೆಲವು ವಿದೇಶಿ ರಾಜಕಾರಣಿಗಳ ಅಭಿಪ್ರಾಯದಂತೆ ದಲೈಲಾಮಾ ಅವರು ಧಾರ್ಮಿಕ ವ್ಯಕ್ತಿ, ಆದರೆ ಅವರು ರಾಜಕೀಯ ಮಾಡುತ್ತಿರುವುದರ ಪರಿಣಾಮ ದೇಶಭ್ರಷ್ಟರಾಗಿದ್ದಾರೆ. ಆ ನಿಟ್ಟಿನಲ್ಲಿ ದಲೈಲಾಮಾ ಅವರೊಬ್ಬ ರಾಜಕೀಯ ಗುರು ಎಂದು ವ್ಯಂಗ್ಯವಾಡಿದರು.
ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ ವಕ್ತಾರರಾಗಿರುವ ಲೀ ಸುದ್ದಿಗಾರರೊಂದಿಗೆ ಮಾತನಾಡುತ್ತ, ದಲೈಲಾಮಾ ಅವರು ಅಖಂಡ ಟಿಬೆಟ್ ಪ್ರಸ್ತಾಪ ಮಾಡಬೇಕು. ಅಲ್ಲದೇ ಅವರು ಈಗಾಗಲೇ ಗಡಿಪಾರುಗೊಂಡಿದ್ದಾರೆ. ಹಾಗಾಗಿ ಅವರು ಟಿಬೆಟ್ ಸ್ವಾತಂತ್ರ್ಯವನ್ನು ಬೆಂಬಲಿಸಬಾರದು ಎಂದು ಹೇಳಿದರು.
ಟಿಬೆಟ್ ಚೀನಾದ ಅವಿಭಾಜ್ಯ ಅಂಗವಲ್ಲ ಎಂಬುದು ಲಾಮಾ ಅವರ ಆರೋಪವಾಗಿದೆ. ಆದರೆ ಟಿಬೆಟ್ ಸಾಮಾಜಿಕ ಹಾಗೂ ಆರ್ಥಿಕವಾಗಿ 1959ರಿಂದಲೂ ಚೀನಾದ ಹಿಡಿದಲ್ಲಿಯೇ ಇದೆ ಎಂಬುದನ್ನು ದಲೈಲಾಮಾ ಅವರು ಮನಗಾಣಬೇಕು ಎಂದರು. ದಲೈಲಾಮಾ ಅವರಿಗೆ ಟಿಬೆಟ್ ಇತಿಹಾಸದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ ಎಂದು ಲೀ ದೂರಿದರು.