ಇರಾಕ್‌ನ ವಿವಿಧೆಡೆ ಮತದಾರರನ್ನು ಗುರಿಯಾಗಿಟ್ಟು ನಡೆಸಿದ ಬಾಂಬ್ ಸ್ಫೋಟದಲ್ಲಿ 17ಮಂದಿ ಬಲಿಯಾಗಿದ್ದಾರೆ. ಭಾನುವಾರ ದೇಶಾದ್ಯಂತ ಸಂಸತ್ ಚುನಾವಣೆ ನಡೆಯಲು ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಈ ದುಷ್ಕೃತ್ಯ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರು ತಮ್ಮ ಅಟ್ಟಹಾಸವನ್ನು ನಡೆಸುವ ಮೂಲಕ ಚುನಾವಣೆ ಪ್ರಕ್ರಿಯೆಯನ್ನು ಅಸ್ಥಿರಗೊಳಿಸುವ ಯತ್ನಕ್ಕೆ ಕೈಹಾಕಿರುವುದಾಗಿ ಅಧಿಕಾರಿಗಳು ಆರೋಪಿಸಿದ್ದಾರೆ. ಗುರುವಾರ ಸಂಭವಿಸಿದ ಅವಳಿ ಸ್ಫೋಟ ಮತದಾನ ಕೇಂದ್ರದ ಹೊರಭಾಗದಲ್ಲಿ ನಡೆದಿರುವುದಾಗಿ ತಿಳಿಸಿದ್ದಾರೆ.
ಚುನಾವಣೆಯನ್ನು ತಡೆಯುವುದೇ ಭಯೋತ್ಪಾದಕರ ಮುಖ್ಯ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಉಗ್ರರು ಚುನಾವಣೆಗೂ ಮುನ್ನವೇ ಸ್ಫೋಟ ಕೃತ್ಯದಲ್ಲಿ ತೊಡಗಿ ಮತದಾರರಲ್ಲಿ ಆತಂಕ ಮೂಡಿಸಲು ಯತ್ನಿಸುವುದಾಗಿ ಸಹಾಯಕ ಆಂತರಿಕ ಸಚಿವ ಆಯ್‌ಡೆನ್ ಖಾಲೀದ್ ಖ್ವಾದರ್ ವಿವರಿಸಿದ್ದಾರೆ.
ದೇಶಾದ್ಯಂತ ಪಾರ್ಲಿಮೆಂಟ್ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದ ಅವರು, ಉಗ್ರರಿಗೆ ಮತದಾನ ಕೇಂದ್ರದ ಬಳಿ ತೆರಳಲು ಸಾಧ್ಯವಿಲ್ಲ. ಯಾಕೆಂದರೆ ಮತದಾನ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿರುವುದಾಗಿ ಹೇಳಿದರು.