12ರಿಂದ 14ರೊಳಗಿನ ಅಪ್ರಾಪ್ತರು ಭಾರೀ ಸಂಖ್ಯೆಯಲ್ಲಿ ಅಸುರಕ್ಷಿತ ಸೆಕ್ಸ್ ನಡೆಸುತ್ತಿರುವುದನ್ನು ಸ್ವಿಜರ್ಲೆಂಡ್ ಸರಕಾರ ಸಮೀಕ್ಷೆ ಮುಖಾಂತರ ಕಂಡುಕೊಂಡಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳಿಗೆ ಹೊಂದಿಕೊಳ್ಳುವ ಗಾತ್ರದ ಕಾಂಡೋಮ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.
'ಹಾಟ್‌ಶಾಟ್' ಎಂದು ಹೆಸರಿಸಲಾಗಿರುವ ಈ ಕಾಂಡೋಂ ಮಾಮೂಲಿ ಕಾಂಡೋಂಗಿಂತ ಕಡಿಮೆ ಗಾತ್ರವನ್ನು ಹೊಂದಿರುತ್ತದೆ. ಅಂದರೆ 5.2 ಸೆಂಟಿ ಮೀಟರ್ ವ್ಯಾಸದ ಕಾಂಡೋಂ ಮಾತ್ರ ಇದುವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿತ್ತು, ಆದರೆ ಇನ್ನು ಮುಂದೆ 4.5 ಸೆಂಟಿ ಮೀಟರ್ ವ್ಯಾಸದ ಕಾಂಡೋಂಗಳೂ ಲಭ್ಯ. ಆದರೆ ಇದರ ಉದ್ದದಲ್ಲಿ (19 ಸೆಂಟಿ ಮೀಟರ್) ಯಾವುದೇ ಬದಲಾವಣೆಯಿಲ್ಲ. ಇದರ ಉದ್ದೇಶ ಮಕ್ಕಳಲ್ಲಿನ ಅಸುರಕ್ಷಿತ ಲೈಂಗಿಕ ಸಂಪರ್ಕವನ್ನು ಕಡಿಮೆ ಮಾಡುವುದು.
10ರಿಂದ 20 ವರ್ಷದೊಳಗಿನ 1480 ಮಂದಿಯನ್ನು ಸಂಪರ್ಕಿಸಿದ್ದ ರಾಷ್ಟ್ರೀಯ ಮಕ್ಕಳ ಮತ್ತು ಹದಿಹರೆಯದವರ ಆಯೋಗವು ಸಮೀಕ್ಷೆಯೊಂದನ್ನು ನಡೆಸಿತ್ತು. ಅದರ ಪ್ರಕಾರ 1990ಕ್ಕೆ ಹೋಲಿಸಿದರೆ ಈಗ 12ರಿಂದ 14 ವರ್ಷದ ಹದಿಹರೆಯದವರು ಹೆಚ್ಚು ಸೆಕ್ಸ್‌ಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಕಂಡುಕೊಳ್ಳಲಾಗಿತ್ತು ಎಂದು 'ಡೈಲೀ ಟೆಲಿಗ್ರಾಫ್' ವರದಿ ಮಾಡಿದೆ.
ಸ್ವಿಜರ್ಲೆಂಡ್‌ನ ಜನಪ್ರಿಯ ಕಾಂಡೋಂ ತಯಾರಿಕಾ ಕಂಪನಿ 'ಲಾಂಪ್ರೆಚ್ಟ್ ಎಜಿ' ಈ ಸಣ್ಣ ಕಾಂಡೋಮ್‌ಗಳನ್ನು ತಯಾರಿಸುತ್ತಿದೆ. ಪ್ರತೀ ಪ್ಯಾಕಿನಲ್ಲಿ ಆರು ಕಾಂಡೋಮ್‌ಗಳಿರುತ್ತವೆ. ಇದರ ಬೆಲೆ 7.6 ಸ್ವಿಸ್ ಫ್ರಾಂಕ್ ಅದರೆ ಸುಮಾರು 325 ರೂಪಾಯಿಗಳು.
ಹದಿಹರೆಯದ ಹುಡುಗರ ಅಪಾಯಕಾರಿ ವರ್ತನೆಯನ್ನು ಬಿಂಬಿಸುವ ಫಲಿತಾಂಶ ನಮಗೆ ಆಘಾತ ತಂದಿತ್ತು. ತಮ್ಮನ್ನು ರಕ್ಷಿಸಿಕೊಳ್ಳಲು ಅವರಲ್ಲಿ ಹೆಚ್ಚು ಆಸಕ್ತಿಯಿದ್ದಂತಿಲ್ಲ. ಅವರಲ್ಲಿ ಸಾಕಷ್ಟು ಲೈಂಗಿಕ ಜ್ಞಾನವೂ ಇರುವುದಿಲ್ಲ ಎಂದು ಸ್ವಿಜರ್ಲೆಂಡ್ ಸರಕಾರದ ಸಮೀಕ್ಷಾ ತಂಡದ ಮುಖ್ಯಸ್ಥ ಬಾಸೆಲ್ ಯುನಿವರ್ಸಿಟಿಯ ನಾನ್ಸಿ ಬಾಡ್ಮರ್ ತಿಳಿಸಿದ್ದಾರೆ.
ಕಂಪನಿಯು ಆರಂಭದಲ್ಲಿ ದೊಡ್ಡ ಹಾಗೂ ಸಣ್ಣ ಗಾತ್ರದ 55,000 ಕಾಂಡೋಮ್ ಪ್ಯಾಕೆಟ್‌ಗಳನ್ನು ತಯಾರಿಸಲಿದೆ. ವಿದೇಶಗಳಲ್ಲೂ ಮಾರಾಟ ಮಾಡಲು ಅವಕಾಶ ಸಿಕ್ಕಿದಲ್ಲಿ ಅಪ್ರಾಪ್ತ ಹುಡುಗಿಯರು ಹೆಚ್ಚು ಗರ್ಭವತಿಯರಾಗುತ್ತಿರುವ ಬ್ರಿಟನ್ ದೇಶವನ್ನೇ ಆರಿಸಿಕೊಳ್ಳುವುದಾಗಿ ಕಂಪನಿ ಹೇಳಿಕೊಂಡಿದೆ.
ಅವರೇನು ಮಾಡುತ್ತಿದ್ದಾರೆ, ಅದರ ಪರಿಣಾಮವೇನು ಎಂಬುದರ ಕುರಿತು ಅವರಿಗೆ ಏನೂ ತಿಳಿದಿರುವುದಿಲ್ಲ. ಅಲ್ಲದೆ ಅದರ ಪರಿಣಾಮಗಳನ್ನು ನೇರವಾಗಿ ಹದಿಹರೆಯದ ಹುಡುಗಿಯರಿಗೇ ಬಿಟ್ಟು ಬಿಡುತ್ತಾರೆ. ತಮಗೆ ದೊಡ್ಡ ಗಾತ್ರದ ಕಾಂಡೋಂ ಹೊಂದುವುದಿಲ್ಲವಾದ್ದರಿಂದ ಅವರು ಅದರತ್ತ ಹೆಚ್ಚಿನ ಗಮನವನ್ನೇ ಕೊಡುವುದಿಲ್ಲ ಎಂದು ಸಮೀಕ್ಷಾ ತಂಡ ವಿವರಣೆ ನೀಡಿದೆ.