ಭಾರತೀಯರ ಮೇಲೆ ನಡೆಯುತ್ತಿರುವ ಜನಾಂಗೀಯ ಹಲ್ಲೆಯನ್ನು ತಡೆಯುವುದಾಗಿ ಆಸ್ಟ್ರೇಲಿಯಾ ಭರವಸೆ ನೀಡಿದ ಬೆನ್ನಲ್ಲೇ, ನಾಪತ್ತೆಯಾಗಿದ್ದ ಮಗುಗಾಗಿ ಮಾನವ ಹತ್ಯೆ ಪತ್ತೆದಳದ ತೀವ್ರ ಶೋಧದ ನಂತರ ಮೆಲ್ಬೊರ್ನ್ ನಗರದಲ್ಲಿ 3ವರ್ಷದ ಭಾರತೀಯ ಮಗುವಿನ ಶವ ಪತ್ತೆಯಾಗಿದೆ.
ತಮ್ಮ ಮಗು ಕಾಣೆಯಾಗಿದೆ ಎಂದು ಪೋಷಕರು ದೂರನ್ನು ದಾಖಲಿಸಿದ ನಂತರ, ಮಾನವಹತ್ಯೆ ಪತ್ತೆದಳ ಶೋಧ ಕಾರ್ಯಾಚರಣೆ ನಡೆಸಿದ ನಂತರ ಗುರುವಾರ ರಾತ್ರಿ ಓಕ್‌ಲ್ಯಾಂಡ್ ಜಂಕ್ಷನ್‌ನ ವೈಲ್ಡ್‌ವುಡ್ ರಸ್ತೆ ಸಮೀಪ ಮಗುವಿನ ಶವ ಪತ್ತೆಯಾಗಿದ್ದು, ಇದೊಂದು ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ. ಮಗುವನ್ನು ಗುರ್ಶನ್ ಸಿಂಗ್ ಚಾನ್ನಾ ಎಂದು ಗುರುತಿಸಲಾಗಿದೆ.
ಬುಧವಾರ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಸ್ಟೇಫನ್ ಸ್ಮಿತ್ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಭಾರತೀಯರ ಮೇಲೆ ಆಸೀಸ್‌ನಲ್ಲಿ ನಡೆದ ದಾಳಿಗೆ ವಿಷಾದ ವ್ಯಕ್ತಪಡಿಸಿ, ಇನ್ನು ಮುಂದೆ ಆ ರೀತಿ ದಾಳಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಮತ್ತೊಂದು ಆಘಾತಕಾರಿ ಘಟನೆ ಬಹಿರಂಗಗೊಂಡಿದೆ.
ಆದರೆ ಮಗು ಯಾವ ಕಾರಣದಿಂದ ಸಾವನ್ನಪ್ಪಿದೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ಮಗುವಿನ ಶವಪರೀಕ್ಷೆಯ ವರದಿ ಬಂದ ನಂತರ ವಿವರ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಲಾಲೋರ್‌ನಲ್ಲಿರುವ ಮನೆಯಿಂದ ಮಗು ನಾಪತ್ತೆಯಾದ 45ನಿಮಿಷಗಳಲ್ಲಿಯೇ ತಾಯಿ ಹರ್‌ಪ್ರೀತ್ ಕೌರ್ ಚಾನ್ನಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಮಗುವಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ನಂತರ ಶವ ಪತ್ತೆಯಾಗಿದೆ.