ಕಳೆದ ವಾರದ ಕಾಬೂಲ್ ಮೇಲಿನ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೋಯ್ಬಾವು ಭಾರತೀಯರನ್ನು ಗುರಿಯಾಗಿರಿಸಿಕೊಂಡಿರಲಿಲ್ಲ ಎಂಬ ತನ್ನ ಹೇಳಿಕೆಗೆ ಖಾರ ಪ್ರತಿಕ್ರಿಯೆ ಬರುತ್ತಿದ್ದಂತೆ ಅಫಘಾನಿಸ್ತಾನ ಮತ್ತು ಪಾಕಿಸ್ತಾನಗಳ ಅಮೆರಿಕಾದ ವಿಶೇಷ ಪ್ರತಿನಿಧಿ ರಿಚರ್ಡ್ ಸಿ ಹಾಲ್ಬೂರ್ಕ್ ಕ್ಷಮೆ ಯಾಚಿಸಿದ್ದಾರೆ.
ಇತ್ತೀಚಿನ ಕಾಬೂಲ್ ಭಯೋತ್ಪಾದನಾ ದಾಳಿಗೆ ಸಂಬಂಧಪಟ್ಟಂತೆ ನಾನು ನೀಡಿದ ಹೇಳಿಕೆಯಿಂದ ಯಾವುದೇ ತಪ್ಪರ್ಥಕ್ಕೆ ಎಡೆಯಾಗಿದ್ದರೆ ವಿಷಾದಿಸುತ್ತೇನೆ ಎಂದು ಆರು ಭಾರತೀಯರು ಮತ್ತು 10 ಇತರ ದೇಶಗಳ ಪ್ರಜೆಗಳ ಸಾವಿಗೆ ಕಾರಣವಾದ ಘಟನೆಯನ್ನು ಉಲ್ಲೇಖಿಸುತ್ತಾ ಹಾಲ್ಬೂರ್ಕ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಭಾರತೀಯರು ಗುರಿಯಾಗಿರಲಿಲ್ಲ ಎಂದು ನಾನು ಹೇಳಿರಲಿಲ್ಲ. ಆರಂಭದಲ್ಲಿ ಈ ದಾಳಿಯನ್ನು ಗಮನಿಸುವಾಗ ಭಾರತೀಯ ಅಧಿಕಾರಿಗಳ ತಾಣಕ್ಕೆ ನಡೆದ ದಾಳಿಯಂತೆ ಕಂಡಿರಲಿಲ್ಲ. ಈ ಕುರಿತು ತಕ್ಷಣ ಬಂದ ಮಾಹಿತಿಗಳು ವಿಶ್ವಸನೀಯವಾಗಿರಲಿಲ್ಲ. ಹಾಗಾಗಿ ನಾನು ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಫಘಾನಿಸ್ತಾನದೊಳಗೆ ಸೇರಿದಂತೆ ಭಾರತೀಯ ನಾಗರಿಕರು ಭಯೋತ್ಪಾದಕರ ಗುರಿಯಾಗಿದ್ದಾರೆ ಮತ್ತು ಗುರಿಯಾಗಿಯೇ ಮುಂದುವರಿಯುತ್ತಿದ್ದಾರೆ ಎಂಬುದು ನಮಗೆಲ್ಲ ತಿಳಿದಿರುವ ವಿಚಾರವೇ ಆಗಿದೆ. ಇಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ನನ್ನದೂ ಸಾಂತ್ವನವಿದೆ ಎಂದು ಹಾಲ್ಬೂರ್ಕ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ಮಂಗಳವಾರ ಹೇಳಿಕೆ ನೀಡಿದ್ದ ಅವರು, 'ಈ ದಾಳಿ ಭಾರತೀಯ ದೂತವಾಸದಂತಹ ಭಾರತೀಯ ಮೂಲದವರು ಉಳಿದುಕೊಂಡಿರುವುದನ್ನು ಗುರಿ ಮಾಡಿಕೊಂಡ ದಾಳಿ ಎಂಬ ವಾದವನ್ನು ನಾನು ಒಪ್ಪುವುದಿಲ್ಲ' ಎಂದಿದ್ದರು.
ಹಾಲ್ಬೂರ್ಕ್ ಹೇಳಿಕೆಯಿಂದ ಆಘಾತಗೊಂಡಿದ್ದ ಭಾರತ ತನ್ನ ತೀವ್ರ ಅಸಮಾಧಾನವನ್ನು ಅಮೆರಿಕಾಕ್ಕೆ ರವಾನಿಸಿತ್ತು. ಮಾಧ್ಯಮಗಳು ಕೂಡ ಇದನ್ನು ಬೆಟ್ಟು ಮಾಡಿ ತೋರಿಸಿದ ನಂತರ ಇದೀಗ ಹಾಲ್ಬೂರ್ಕ್ ಕ್ಷಮೆ ಯಾಚಿಸಿದ್ದಾರೆ.