ಮಗುವೊಂದರ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ತಪ್ಪಿ ಮೂತ್ರಕೋಶವನ್ನೇ ಶೇ.90ರಷ್ಟು ಕತ್ತರಿಸಿದ ಪ್ರಕರಣದಲ್ಲಿ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿನ ಭಾರತೀಯ ಮೂಲದ ಮಹಿಳಾ ಸರ್ಜನ್ ಒಬ್ಬರು ಅಪರಾಧಿ ಎಂಬುದು ಸಾಬೀತಾಗಿದ್ದು, ತನಿಖೆ ನಡೆಸಿದ ವೈದ್ಯಕೀಯ ತಂಡವು ಇದನ್ನು ಬಹುದೊಡ್ಡ ಪ್ರಮಾದ ಎಂದು ಬಣ್ಣಿಸಿದೆ.
1991ರಲ್ಲಿ ಲಂಡನ್ ಯುನಿವರ್ಸಿಟಿಯಿಂದ ವೈದ್ಯಕೀಯ ಅರ್ಹತೆಗಳನ್ನು ಪಡೆದುಕೊಂಡಿದ್ದ 43ರ ಹರೆಯದ ಪಿರೀನಾ ಕಪೂರ್ ಎಂಬ ಸರ್ಜನ್ ಈ ಆಪರೇಷನ್ ನಡೆಸಿದ್ದರು. ಇವರ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣ ಎಂದು ಪ್ರಕರಣದ ತನಿಖೆ ನಡೆಸಿರುವ ಪ್ರಧಾನ ವೈದ್ಯಕೀಯ ಮಂಡಳಿ ಇದೀಗ ತೀರ್ಪು ನೀಡಿದೆ.
ಕಪೂರ್ ಅವರ ಬೇಜವಾಬ್ದಾರಿಯುತ ಕೃತ್ಯಕ್ಕಾಗಿ ವೈದ್ಯಕೀಯ ಮಂಡಳಿಯು ಇನ್ನಷ್ಟೇ ಶಿಕ್ಷೆಯ ಪ್ರಮಾಣವನ್ನು ಘೋಷಿಸಬೇಕಿದೆ.
ಈ ನಡುವೆ ವೈದ್ಯಕೀಯ ಮಂಡಳಿಯ ನಿರ್ಧಾರವನ್ನು ಮಗುವಿನ ಹೆತ್ತವರು ಸ್ವಾಗತಿಸಿದ್ದಾರೆ. ತಮ್ಮ ಮಗಳಿಗಾದ ತೊಂದರೆಗೆ ವೈದ್ಯೆಯೇ ಕಾರಣರಾಗಿದ್ದು, ಅದರ ನೋವು ಅವರ ಅನುಭವಕ್ಕೂ ಬರಬೇಕಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಸಾಲ್ಫಾರ್ಡ್‌ನಲ್ಲಿನ ಮ್ಯಾಂಚೆಸ್ಟರ್ ಮಕ್ಕಳ ಆಸ್ಪತ್ರೆಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಮಗುವಿಗೆ ಆದ ಪ್ರಮಾದವು ಸರಿಪಡಿಸಲಾಗದ್ದು ಮತ್ತು ಈ ತಪ್ಪು ತನ್ನಿಂದಲೇ ನಡೆದಿದೆ ಎಂಬುದನ್ನು ಕಪೂರ್ ಒಪ್ಪಿಕೊಂಡಿದ್ದಾರೆ.
ಆಪರೇಷನ್ ನಡೆಸುವ ಸಂದರ್ಭದಲ್ಲಿ ಮಗುವಿಗೆ ಕೇವಲ ಏಳು ವಾರಗಳಷ್ಟೇ ಆಗಿತ್ತು. ಇದೀಗ 18 ತಿಂಗಳು ತುಂಬಿರುವ ಮಗು, ಜೀವನಪೂರ್ತಿ ಮೂತ್ರವನ್ನು ಹೊರ ತೆಗೆಯುವ ಕೃತಕ ನಳಿಕೆಯನ್ನು ಬಳಸಬೇಕಾಗಿದೆ.
ಮ್ಯಾಂಚೆಸ್ಟರ್ ಮಕ್ಕಳ ಆಸ್ಪತ್ರೆಯ ಇತರ ಸಿಬ್ಬಂದಿಗಳು ಸಹಕರಿಸದೇ ಇದ್ದಿದ್ದರೆ ನಮ್ಮ ಮಗಳನ್ನು ನಾವಿಂದು ಇಲ್ಲಿ ನೋಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಗುವಿನ ಹೆತ್ತವರು ಹೇಳಿದ್ದಾರೆ.