ನಿಷೇಧಿತ ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಳಂನ ಸ್ಥಳೀಯ ಸಂಘಟನೆಯ 6ಮಂದಿ ಶಂಕಿತ ಎಲ್‌ಟಿಟಿಇ ಸದಸ್ಯರನ್ನು ಬಂಧಿಸಿರುವುದಾಗಿ ಜರ್ಮನ್ ಪೊಲೀಸರು ತಿಳಿಸಿದ್ದಾರೆ.
ಬಂಧಿತರಲ್ಲಿ ಮೂರು ಮಂದಿ ಜರ್ಮನ್ ಪ್ರಜೆಗಳು ಹಾಗೂ ಮೂರು ಮಂದಿ ಶ್ರೀಲಂಕಾದ ಪ್ರಜೆಗಳಾಗಿದ್ದು, ಅವರೆಲ್ಲಾ ನಿಷೇಧಿತ ಎಲ್‌ಟಿಟಿಇ ಉಗ್ರಗಾಮಿ ಸಂಘಟನೆಯ ತಮಿಳು ಸಂಘಟನೆ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆಂದು ಫೆಡರಲ್ ಪ್ರಾಸಿಕ್ಯೂಟರ್ಸ್ ಹೇಳಿಕೆಯಲ್ಲಿ ವಿವರಿಸಿದ್ದಾರೆ.
2009ರಲ್ಲಿ ಶ್ರೀಲಂಕಾ ಮಿಲಿಟರಿ ಪಡೆ ತಮಿಳು ಬಂಡುಕೋರರ ಪಡೆಯನ್ನು ಸಂಪೂರ್ಣವಾಗಿ ಪರಾಜಯಗೊಳಿಸುವ ಮೂಲಕ ಲಂಕಾ ಸರ್ಕಾರದ 25ವರ್ಷಗಳ ನಿರಂತರ ಹೋರಾಟಕ್ಕೆ ಜಯ ಸಿಕ್ಕಿತ್ತು. ಅಲ್ಲದೇ ಯುರೋಪಿಯನ್ ಒಕ್ಕೂಟದಲ್ಲಿ ಎಲ್‌ಟಿಟಿಇಯನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಿತ್ತು.
ಬಂಧಿತ ಆರು ಮಂದಿ ಜರ್ಮನಿಯಲ್ಲಿ ವಾಸ್ತವ್ಯವಾಗಿದ್ದು, ತಮ್ಮ ಸಂಘಟನೆಯ ಬಲವರ್ಧನೆಗಾಗಿ ವಂತಿಗೆ ಸಂಗ್ರಹಿಸುತ್ತಿದ್ದು, ಅವರು ಅದನ್ನು ಶ್ರೀಲಂಕಾದಲ್ಲಿರುವ ತಮಿಳು ಟೈಗರ್ಸ್‌ಗಳನ್ನು ಬೆಂಬಲಿಸಲು ಉಪಯೋಗಿಸುತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.