ಪಾಕಿಸ್ತಾನದಲ್ಲಿರುವ ಎಲ್ಲಾ ತಾಲಿಬಾನ್ ಉಗ್ರರಿಗೆ ಮುಖ್ಯವಾಗಿ ಬೇಕಾಗಿರುವುದು ಹಣ ಮಾತ್ರ, ಅವರು ಮಾತನಾಡುವುದು ಕೇವಲ ಹಣದ ಬಗ್ಗೆಯೇ ಎಂದು ಅಪಹರಣಕಾರ ಉಗ್ರರಿಂದ ರಕ್ಷಿಸಲ್ಪಟ್ಟ ಗುರ್ವಿಂದರ್ ಸಿಂಗ್ ತಿಳಿಸಿದ್ದಾನೆ.
ಪೇಶಾವರದಿಂದ ಅಪಹರಿಲ್ಪಟ್ಟ ಇಬ್ಬರು ಸಿಖ್‌ರಲ್ಲಿ ಗುರ್ವಿಂದರ್ ಒಬ್ಬರಾಗಿದ್ದು, ಸುಮಾರು 40ದಿನಗಳ ಬಳಿಕ ಪಾಕ್ ಪೊಲೀಸರು ತಾಲಿಬಾನ್ ಉಗ್ರರ ಹಿಡಿತದಿಂದ ಅವರನ್ನು ರಕ್ಷಿಸಿದ್ದರು. ತಾಲಿಬಾನ್ ಉಗ್ರರು ಪಶ್ತುನ್ ಭಾಷೆ ಮಾತನಾಡುತ್ತಿದ್ದರು ಎಂದು ವಿವರಿಸಿದ್ದಾರೆ.
ಆದರೆ ಕಳೆದ ತಿಂಗಳು ಅಪಹರಿಸಲ್ಪಟ್ಟ ಮೂರನೇ ಅಪಹೃತ್ ಸಿಖ್ ಉದ್ಯಮಿ ನಿಗದಿತ ಗಡುವಿನನೊಳಗೆ ಬೇಡಿಕೆಯ ಹಣವನ್ನು ಪಾವತಿಸದಿದ್ದ ಪರಿಣಾಮ ಆತನ ಶಿರಚ್ಛೇದನ ಮಾಡಿ ಪೇಶಾವರದ ಗುರುದ್ವಾರಕ್ಕೆ ಕಳುಹಿಸಿ ಕೊಟ್ಟಿದ್ದರು.
ಇಸ್ಲಾಂನ ಜಿಹಾದ್ ಹೆಸರಿನಲ್ಲಿ ತಾಲಿಬಾನ್ ಉಗ್ರರು ನಂಬಿಕೆಯನ್ನಿಟ್ಟು ಹೋರಾಟ ನಡೆಸುತ್ತಿರುವುದಾಗಿ ಸಿಂಗ್ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾನೆ.
ತಾಲಿಬಾನ್ ಉಗ್ರರಿಗೆ ಬೇಕಾಗಿರುವುದು ಹಣ ಮಾತ್ರ, ಅವರೆಲ್ಲಾ ಧಾರ್ಮಿಕ ವ್ಯಕ್ತಿಗಳಂತೆ ಕಂಡಿಲ್ಲ. ಯಾಕೆಂದರೆ ನಲ್ವತ್ತು ದಿನಗಳ ಕಾಲ ಅವರ ಹಿಡಿತದಲ್ಲಿದ್ದ ಸಂದರ್ಭದಲ್ಲಿ ಉಗ್ರರು ಪ್ರಾರ್ಥನೆ ಮಾಡಿರುವುದನ್ನು ನಾವು ನೋಡಿಲ್ಲ ಎಂದು ಪೇಶಾವರ ಮೊಹಲ್ಲಾ ಜಗನ್ ಶಾ ಮನೆಯಲ್ಲಿ ವಿವರಣೆ ನೀಡಿದ್ದರು.
ಗುರ್ವಿಂದರ್ ಸಿಂಗ್ ಜೊತೆ ಸುರ್ಜೀತ್ ಸಿಂಗ್ ಅವರನ್ನು ರಕ್ಷಿಸಿದ್ದು, ಅವರನ್ನು ಮನೆಯವರಿಗೆ ಒಪ್ಪಿಸಲಾಗಿತ್ತು. ಜಸ್ಪಾಲ್ ಸಿಂಗ್ ಎಂಬ ಉದ್ಯಮಿಯನ್ನು ತಾಲಿಬಾನ್ ಉಗ್ರರು ಶಿರಚ್ಛೇದನ ಮಾಡಿದ್ದರು.