ತನಿಖಾ ವರದಿಗಾಗಿ ಕ್ರೈಸ್ತರ ಕ್ಷಮೆ ಯಾಚಿಸಿದ ಮುಸ್ಲಿಂ ಪತ್ರಿಕೆ
ಕೌಲಾಲಂಪುರ, ಶನಿವಾರ, 6 ಮಾರ್ಚ್ 2010( 16:35 IST )
ರೋಮನ್ ಕ್ಯಾಥೋಲಿಕ್‌ಗಳು ಎಂಬ ಸೋಗಿನಲ್ಲಿ ಚರ್ಚ್ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಇಬ್ಬರು ಮುಸ್ಲಿಮರು ಮಾಡಿದ್ದ ತನಿಖಾ ವರದಿಯನ್ನು ಪ್ರಕಟಿಸಿ ಕ್ರೈಸ್ತರ ಆಕ್ರೋಶಕ್ಕೆ ಗುರಿಯಾಗಿದ್ದ ಮಲೇಷಿಯಾದ ನಿಯತಕಾಲಿಕೆಯೊಂದು ಇದೀಗ ಕ್ಷಮೆ ಯಾಚಿಸಿದೆ.
ಇಲ್ಲಿನ ಬಹುಸಂಖ್ಯಾತರ ಧರ್ಮ ಇಸ್ಲಾಮ್‌ನ ಆಸಕ್ತಿಗಳನ್ನು ರಕ್ಷಿಸಲು ಮತ್ತು ಮುಸ್ಲಿಮೇತರರ ಹಕ್ಕುಗಳನ್ನು ನಿರ್ಲಕ್ಷಿಸಲು ಸರಕಾರಿ ಮೂಲಗಳು ಮತ್ತು ಮುಸ್ಲಿಂ ಧಾರ್ಮಿಕ ಗುರುಗಳು ಅತ್ಯುತ್ಸಾಹ ತೋರಿಸುತ್ತಿವೆ ಎಂದು ಈಗಾಗಲೇ ಅಸಮಾಧಾನಗೊಂಡಿರುವ ಅಲ್ಪಸಂಖ್ಯಾತರನ್ನು ಪತ್ರಿಕೆಯ ಈ ಕ್ಷಮೆ ಕೊಂಚ ಸಮಾಧಾನ ಪಡಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಮಲೇಷಿಯಾ ಮುಸ್ಲಿಮರನ್ನು ಕೇಂದ್ರೀಕರಿಸಿ ವರದಿಗಳನ್ನು ಪ್ರಕಟಿಸುವ 'ಅಲ್ ಇಸ್ಲಾಂ' ಎಂಬ ಮಾಸಿಕವು ತನ್ನ ಪ್ರಕಾಶಕರ ವೆಬ್‌ಸೈಟಿನಲ್ಲಿ ಈ ಕ್ಷಮೆ ಯಾಚಿಸಿದ್ದು, ಕ್ರಿಶ್ಚಿಯನ್ನರು ಅದರಲ್ಲೂ ಕ್ಯಾಥೋಲಿಕರನ್ನು ಅನುದ್ದೇಶಪೂರ್ವಕವಾಗಿ ನೋಯಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದೆ.
ಮುಸ್ಲಿಂ ಯುವಕರನ್ನು ಚರ್ಚುಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂಬ ಕುರಿತ ತನಿಖಾ ವರದಿಯನ್ನು 2009ರ ಮೇ ತಿಂಗಳಿನ ಸಂಚಿಕೆಯಲ್ಲಿ ಮ್ಯಾಗಜಿನ್ ಪ್ರಕಟಿಸಿತ್ತು. ಆದರೆ ಈ ಸಂದರ್ಭದಲ್ಲಿ ಆ ಕುರಿತಂತೆ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದೂ ಇದೇ ಲೇಖನದಲ್ಲಿ ತಿಳಿಸಲಾಗಿತ್ತು.
ಲೇಖನಕ್ಕಾಗಿ ತನಿಖೆ ಮಾಡಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಮಲೇಷಿಯಾ ಸರಕಾರವನ್ನು ಕ್ಯಾಥೋಲಿಕ್ ಚರ್ಚುಗಳ ಮುಖ್ಯಸ್ಥ ಆರ್ಚ್‌ಬಿಷಪ್ ಮುರ್ಫಿ ಪಾಕಿಮ್ ತರಾಟೆಗೆ ತೆಗೆದುಕೊಂಡ ನಂತರ ಪತ್ರಿಕೆ ಈ ನಡೆಗೆ ಮುಂದಾಗಿದೆ. ನಿಯತಕಾಲಿಕೆಯು ಕ್ಷಮೆ ಯಾಚಿಸಿದರೂ ಚರ್ಚ್ ಮುಖಂಡರು ಸಂತೃಪ್ತರಾಗುತ್ತಾರೆ ಎಂದು ಪಾಕಿಮ್ ಹೇಳಿದ್ದರು.
ಈ ಇಬ್ಬರು ವ್ಯಕ್ತಿಗಳು ಯಾವುದೇ ದುಷ್ಕೃತ್ಯ ನಡೆಸುವ ಉದ್ದೇಶವನ್ನು ಹೊಂದಿಲ್ಲದೆ ಶುದ್ಧ ಅಜ್ಞಾನವೆನಿಸುವ ಕೃತ್ಯಕ್ಕೆ ಮಾತ್ರ ಮುಂದಾಗಿರುವುದರಿಂದ ಅವರ ವಿರುದ್ಧ ಯಾವುದೇ ಮೊಕದ್ದಮೆಗಳನ್ನು ದಾಖಲಿಸಲಾಗಿಲ್ಲ ಎಂದು ಅಟಾರ್ನಿ ಜನರಲ್ ಅಬ್ದುಲ್ ಗಾನಿ ಪಾಟಿಯಾಲ್ ಪ್ರತಿಕ್ರಿಯಿಸಿದ್ದರು.