ಶ್ರೀಲಂಕಾದ ಪ್ರತ್ಯೇಕತಾವಾದಿ ಸಂಘಟನೆ ತಮಿಳು ಹುಲಿಗಳ ಬೆಂಬಲಿಗರೆಂದು ಹೇಳಲಾಗಿರುವ ಆರು ಮಂದಿ ಶಂಕಿತ ವ್ಯಕ್ತಿಗಳನ್ನು ನಿಧಿ ಸಂಗ್ರಹಣೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಜರ್ಮನ್ ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಎಸ್ಸೆನ್ ಸಮೀಪದ ಒಬೆರ್ಹಾಸೆನ್‌ನ ತಮಿಳು ಸಹಕಾರ ಸಮಿತಿ (ಟಿಸಿಸಿ) ಸೇರಿದಂತೆ ಎಂಟು ಕಡೆ ನಡೆದ ದಾಳಿಗಳಲ್ಲಿ 22ರಿಂದ 58 ವರ್ಷಗಳ ನಡುವಿನ ಆರು ಮಂದಿ ಜರ್ಮನಿ ಮತ್ತು ಶ್ರೀಲಂಕಾ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಫೆಡರಲ್ ಅಭಿಯೋಜಕರು ಮಾಹಿತಿ ನೀಡಿದ್ದಾರೆ.
ಜರ್ಮನಿಯಲ್ಲಿ ವಾಸಿಸುತ್ತಿರುವ ತಮಿಳರಿಂದ ಕೆಲವು ಬಾರಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಸಂಗ್ರಹಿಸಿ ಅದನ್ನು 2006ರಲ್ಲಿ ಐರೋಪ್ಯ ಒಕ್ಕೂಟದಿಂದ ನಿಷೇಧಕ್ಕೊಳಗಾಗಿರುವ ಶ್ರೀಲಂಕಾದ ಭಯೋತ್ಪಾದಕ ಸಂಘಟನೆ 'ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ'ಗೆ (ಎಲ್‌ಟಿಟಿಇ) ಹಸ್ತಾಂತರಿಸುತ್ತದೆ ಎಂದು ಜರ್ಮನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬಂಧಿತರಲ್ಲೊಬ್ಬನಾಗಿರುವ ಶ್ರೀಲಂಕಾ ಪ್ರಜೆ 34ರ ಹರೆಯದ ವಿಜಿಕನೇಂದ್ರ ವಿ.ಎಸ್. ಎಂಬಾತ ಜರ್ಮನಿಯಲ್ಲಿನ ತಮಿಳು ಸಹಕಾರಿ ಸಮಿತಿಯ ಮುಖ್ಯಸ್ಥನೆಂದು ಶಂಕಿಸಲಾಗಿದೆ.
ಕಳೆದ ವರ್ಷ ಶ್ರೀಲಂಕಾ ಸೇನಾಪಡೆಯು ಎಲ್‌ಟಿಟಿಇಯನ್ನು ಬಗ್ಗುಬಡಿದು, ಅದರ ನಾಯಕ ಪ್ರಭಾಕರ್‌ನನ್ನು ಕೊಂದು ಹಾಕಿದ ಬಳಿಕ ಬಹುತೇಕ ತಮಿಳು ಹುಲಿಗಳ ಶೌರ್ಯವು ಕೊನೆಗೊಂಡಿತ್ತಾದರೂ, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಎಲ್‌ಟಿಟಿಇ ಪರ ನಿಧಿ ಸಂಗ್ರಹಿಸಲಾಗುತ್ತಿದೆ ಎಂಬ ವರದಿಗಳು ಬರುತ್ತಿವೆ.
ನಿಧಾನದಲ್ಲಿ ಮತ್ತೆ ಶ್ರೀಲಂಕಾ ವಿರುದ್ಧ ಹೋರಾಟಕ್ಕೆ ಪಡೆಯನ್ನು ಎಲ್‌ಟಿಟಿಇ ಸಿದ್ಧಪಡಿಸುತ್ತಿದೆ ಎಂದು ಊಹಿಸಲಾಗುತ್ತಿದ್ದು, ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ಜರ್ಮನಿ ಮತ್ತಿತರ ದೇಶಗಳಲ್ಲಿ ಹಣ ಸಂಗ್ರಹ ನಡೆಯುತ್ತಿದೆ ಎಂದು ಮೂಲಗಳು ಹೇಳುತ್ತಿವೆ.