ಪಾಕಿಸ್ತಾನದ ವಾಯುವ್ಯ ಪ್ರದೇಶದಲ್ಲಿ ಠಿಕಾಣಿ ಹೂಡಿರುವ ಉಗ್ರರನ್ನು ಬಗ್ಗುಬಡಿಯಲು ಮುಂದಾಗಿರುವ ಪಾಕಿಸ್ತಾನ ಮಿಲಿಟರಿ ಪಡೆ ತೆಹ್ರೀಕ್ ಇ ತಾಲಿಬಾನ್ ಸಂಘಟನೆಯ ಸಹಾಯಕ ವರಿಷ್ಠ ಮೌಲ್ವಿ ಪಕೀರ್ ಮುಹಮ್ಮದ್ ಸೇರಿದಂತೆ ಮೂರು ಪ್ರಮುಖ ಉಗ್ರರನ್ನು ಹತ್ಯೆಗೈದಿರುವುದಾಗಿ ಆಂತರಿಕ ಸಚಿವ ರೆಹಮಾನ್ ಮಲಿಕ್ ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ತಾಲಿಬಾನ್ ಪ್ರಮುಖ ಕಮಾಂಡರ್‌ಗಳಾದ ಅಫ್ಘಾನ್ ಪ್ರಜೆ ಖ್ವಾರಿ ಜಿಯುರ್ ರೆಹಮಾನ್ ಮತ್ತು ಫಾಟೆಚ್ ಮುಹಮ್ಮದ್ ಕೂಡ ಸಾವನ್ನಪ್ಪಿದ್ದು, ಈವರೆಗೆ ಒಟ್ಟು 30ಉಗ್ರರು ಬಲಿಯಾಗಿರುವುದಾಗಿ ಖಚಿತಪಡಿಸಿದ್ದಾರೆ.
ಬೈತುಲ್ಲಾ ಮೆಹ್ಸೂದ್‌ನ ಹತ್ಯೆಯ ನಂತರ ಪಾಕಿಸ್ತಾನ್ ತಾಲಿಬಾನ್‌ಗೆ ತಾನೇ ಮುಖ್ಯಸ್ಥ ಎಂದು ಮೌಲ್ವಿ ಘೋಷಿಸಿಕೊಂಡಿದ್ದ. ಅಲ್ಲದೇ ಅಲ್ ಖಾಯಿದಾದ ನಂ-2 ಮುಖಂಡನಾಗಿರುವ ಅಯ್‌ಮನ್ ಅಲ್ ಜವಾಹರಿ ಜೊತೆ ನಿಕಟ ಸಂಪರ್ಕ ಹೊಂದಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದ.
ಪಾಕಿಸ್ತಾನದ ವಾಯುವ್ಯ ಪ್ರದೇಶವಾದ ಪಾಂಡಿಯಲಿಯಲ್ಲಿ ಪಾಕಿಸ್ತಾನ ಮಿಲಿಟರಿ ಪಡೆ ನಡೆಸಿದ ಹೆಲಿಕಾಪ್ಟರ್ ಗನ್‌ಶಿಪ್ ಕಾರ್ಯಾಚರಣೆಯಲ್ಲಿ ತಾಲಿಬಾನ್ ಮುಖಂಡರು ಹತರಾಗಿರುವುದಾಗಿ ಮಲಿಕ್ ವಿವರಿಸಿದ್ದಾರೆ.