ಪಾಕ್ ಉಲ್ಟಾ: ಸಯೀದ್ ಬಂಧನಕ್ಕೆ ಭಾರತ ಬೇಡಿಕೆಯೇ ಇಟ್ಟಿಲ್ಲ!
ಇಸ್ಲಾಮಾಬಾದ್, ಭಾನುವಾರ, 7 ಮಾರ್ಚ್ 2010( 09:52 IST )
ಉಗ್ರರನ್ನು ಮಟ್ಟ ಹಾಕುವ ಬಗ್ಗೆ ಪಾಕಿಸ್ತಾನ ದಿನಕ್ಕೊಂದು ನಿಲುವು ತಳೆಯುತ್ತಿದ್ದು, ಇದೀಗ ಪಾಕ್ ಮತ್ತೊಮ್ಮೆ ರಾಗಬದಲಿದೆ. ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಎಂದು ಶಂಕಿಸಿರುವ ಜಮಾತ್ ಉದ್ ದಾವಾದ ವರಿಷ್ಠ ಹಫೀಜ್ ಸಯೀದ್‌ನನ್ನು ಬಂಧಿಸುವಂತೆ ಭಾರತ ಕೋರಿಯೇ ಇಲ್ಲ ಎಂದು ಆರೋಪಿಸಿದೆ.
ಕಳೆದ ತಿಂಗಳು ನಡೆದ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ವೇಳೆ ಹಫೀಜ್ ಸಯೀದ್ ಬಂಧನದ ಪ್ರಸ್ತಾಪವೇ ಆಗಿರಲಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮದ್ ಖುರೇಷಿ ಹೇಳಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಸಯೀದ್ ಬಂಧನದ ಕುರಿತು ಭಾರತ ಈವರೆಗೂ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಮುಲ್ತಾನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಹಫೀಜ್ ಸಯೀದ್ ಬಂಧನದ ಕುರಿತಂತೆ ಪ್ರತಿಕ್ರಿಯೆ ಕೇಳಿದಾಗ ಖುರೇಷಿ ನೀಡಿದ ಆಘಾತಕಾರಿ ಹೇಳಿಕೆ ಇದಾಗಿದೆ. ಅಲ್ಲದೇ ಸಯೀದ್‌ನನ್ನು ಬಂಧಿಸಿ ಎಂದಾಗಲಿ ಅಥವಾ ಆತನನ್ನು ಭಾರತದ ವಶಕ್ಕೆ ನೀಡುವಂತೆ ಭಾರತ ಬೇಡಿಕೆಯನ್ನೇ ಇಟ್ಟಿರಲಿಲ್ಲ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅಬ್ದುಸ್ ಬಸಿತ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಭಾರತದಲ್ಲಿ ನಡೆದ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಸಂದರ್ಭದಲ್ಲಿ ವಿದೇಶಾಂಗ ಕಾರ್ಯದರ್ಶಿ ನಿರಪಮಾ ರಾವ್ ಅವರು, ಮೊದಲು ಹಫೀಜ್ ಸಯೀದ್‌ನ ಬಂಧಿಸಿ ನಂತರ ಮುಂದಿನ ಮಾತುಕತೆ ಎಂದು ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ತಾಕೀತು ಮಾಡಿದ್ದರು. ಆದರೆ ಪಾಕಿಸ್ತಾನ ಉಲ್ಟಾ ಹೊಡೆಯುವ ಮೂಲಕ ಭಾರತ ಮಾತುಕತೆ ಸಂದರ್ಭದಲ್ಲಿ ಸಯೀದ್ ಬಂಧನದ ಪ್ರಸ್ತಾಪವೇ ಮಾಡಿಲ್ಲ ಎಂದು ಗೂಬೆ ಕೂರಿಸಿದೆ.
ಪಾಕ್ ಹೇಳಿಕೆ ಆಘಾತಕಾರಿ-ಭಾರತ: ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಬಂಧನದ ಕುರಿತ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತ ಭಾನುವಾರ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ವೇಳೆ ಸಯೀದ್ ಬಂಧನದ ವಿಷಯವೇ ಪ್ರಸ್ತಾಪ ಆಗಿಲ್ಲ ಎಂದು ಹೇಳಿಕೆ ನೀಡಿರುವುದು ಆಘಾತಕಾರಿ ವಿಷಯ ಎಂದು ದೂರಿದೆ.