ಇರಾಕ್ ಸಂಸತ್ ಚುನಾವಣೆಗೆ ಬೆಳಿಗ್ಗೆ ಮತದಾನ ಆರಂಭಗೊಂಡ ಬೆನ್ನಲ್ಲೇ ಉಗ್ರರು ಅಟ್ಟಹಾಸ ಮೆರೆದಿದ್ದು, ಬಾಂಬ್, ಮೋರ್ಟಾರ್ ಹಾಗೂ ರಾಕೆಟ್ ದಾಳಿಯ ಪರಿಣಾಮದಿಂದಾಗಿ 24ಮಂದಿ ಬಲಿಯಾಗಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾರ್ಲಿಮೆಂಟ್ ಚುನಾವಣೆಯ ಮತದಾನಕ್ಕೆ ತಡೆಯುಂಟು ಮಾಡುವುದಾಗಿ ಅಲ್ ಖಾಯಿದಾ ಶಪಥಗೈದಿತ್ತು. ಆ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮತದಾನ ಆರಂಭವಾಗುತ್ತಿದ್ದಂತೆಯೇ ಮತಗಟ್ಟೆ ಸಮೀಪ ಬಾಂಬ್ ದಾಳಿ ನಡೆಸುವ ಮೂಲಕ ಅಡ್ಡಿ ಉಂಟು ಮಾಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಫಲ್ಲುಜಾ, ಬಾಕುಬಾ, ಸಾಮ್ರಾ ಸೇರಿದಂತೆ ಬಾಗ್ದಾದ್‌ನ ಹಲವು ನಗರಗಳಲ್ಲಿ ಬಾಂಬ್ ದಾಳಿ ನಡೆಸಿದ್ದು, ಹೆಚ್ಚಿನವು ಮತಗಟ್ಟೆ ಕೇಂದ್ರದ ಬಳಿಯೇ ಸ್ಫೋಟಗೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಂಸತ್ ಚುನಾವಣೆಯ ಅಂಗವಾಗಿ ದೇಶಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಉಗ್ರರು ಅಟ್ಟಹಾಸಗೈಯಲು ಅವಕಾಶ ನೀಡುವುದಿಲ್ಲ ಎಂದು ಶನಿವಾರವಷ್ಟೇ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದರು.
ಕಾತುಯುಷಾ ಪ್ರದೇಶದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಬಿಲ್ಡಿಂಗ್‌ವೊಂದು ಧ್ವಂಸಗೊಂಡು 12ಮಂದಿ ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿದ್ದಾರೆ. ಎರಡನೇ ಸ್ಫೋಟದಲ್ಲಿ 4ಮಂದಿ ಬಲಿಯಾಗಿದ್ದು, 8ಜನ ಗಾಯಗೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.