ಮನೆಯವರೊಂದಿಗೆ ಮಾತನಾಡಲು ಮೊಬೈಲ್ ಬಳಕೆಗೆ ಅವಕಾಶಕ್ಕೆ ತಡೆಯೊಡ್ಡಿರುವ ಕ್ರಮವನ್ನು ಖಂಡಿಸಿ ಬಂಧಿತರಾಗಿರುವ ಶ್ರೀಲಂಕಾದ ಮಿಲಿಟರಿಯ ಮಾಜಿ ಅಧ್ಯಕ್ಷ ಸರತ್ ಫೋನ್ಸೆಕಾ ಉಪವಾಸ ಸತ್ಯಾಗ್ರಹ ಆರಂಭಿಸಿರುವುದಾಗಿ ಪತ್ನಿ ಅನೋಮಾ ಭಾನುವಾರ ತಿಳಿಸಿದ್ದಾರೆ.
ಫೋನ್ಸೆಕಾ ಅವರು ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದ್ದಾರೆ. ತಮ್ಮ ಕುಟುಂಬ ವರ್ಗದೊಂದಿಗೆ ಸಂಪರ್ಕ ಸಾಧಿಸಲು ಮೊಬೈಲ್ ಬಳಕೆಗೆ ನಿಷೇಧ ಹೇರಿರುವುದರಿಂದ ಫೋನ್ಸೆಕಾ ಅವರು ಉಪವಾಸ ಸತ್ಯಾಗ್ರಹದ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು.
ಜನವರಿ ತಿಂಗಳಿನಲ್ಲಿ ಲಂಕಾ ಅಧ್ಯಕ್ಷಗಾದಿಗಾಗಿ ನಡೆದ ಚುನಾವಣೆಯಲ್ಲಿ ಫೋನ್ಸೆಕಾ ಸ್ಪರ್ಧಿಸಿದ್ದು, ಮಹೀಂದಾ ರಾಜಕಪಕ್ಸೆ ವಿರುದ್ಧ ಪರಾಜಯಗೊಂಡಿದ್ದರು. ತದನಂತರ ಅಧ್ಯಕ್ಷ ರಾಜಪಕ್ಸೆ ಅವರನ್ನು ಕೊಲ್ಲುವ ಹಾಗೂ ಸರ್ಕಾರವನ್ನು ಉರುಳಿಸುವ ಸಂಚು ನಡೆಸಿರುವ ಆರೋಪ ಮೇಲೆ ಬಂಧಿಸಲಾಗಿತ್ತು.
ಮೊಬೈಲ್ ಅಥವಾ ದೂರವಾಣಿ ಸೇವೆ ನೀಡುವುದು ಮತ್ತು ಸೇವೆಯನ್ನು ಯಾವ ಸಮಯದಲ್ಲಾದರು ಹಿಂದಕ್ಕೆ ಪಡೆಯಬಹುದಾಗಿದೆ ಎಂದು ಮಿಲಿಟರಿ ವಕ್ತಾರ ಮೇಜರ್ ಜನರಲ್ ಪ್ರಸಾದ್ ಸಮರಸಿಂಘೆ ಪ್ರತಿಕ್ರಿಯಿಸಿದ್ದಾರೆ.