ಸರ್ಕಾರಿ ಸ್ವಾಮಿತ್ವದ ತನಿಖಾ ಸಂಸ್ಥೆಯ ಕಟ್ಟಡವನ್ನು ಗುರಿಯಾಗಿರಿಸಿಕೊಂಡು ಸೋಮವಾರ ಉಗ್ರರು ನಡೆಸಿದ ಆತ್ಮಹತ್ಯಾ ಕಾರ್ ಬಾಂಬ್ ಸ್ಫೋಟದಲ್ಲಿ 11 ಮಂದಿ ಸಾವನ್ನಪ್ಪಿದ್ದು, ಕಟ್ಟಡ ಜಖಂಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ನಗರವಾದ ಲಾಹೋರ್‌ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಈ ಸ್ಫೋಟ ಪ್ರಬಲವಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಬಹುದೆಂದು ಅಧಿಕಾರಿಗಳು ಹೇಳಿದ್ದಾರೆ. ಸ್ಫೋಟದಿಂದ ಕಟ್ಟಡ ಭಾಗಶಃ ಕುಸಿದಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಅವರನ್ನೆಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೋಡೆಲ್ ಟೌನ್ ಪ್ರದೇಶದ ಎಫ್‌ಐಎ(ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ)ಯನ್ನು ಗುರಿಯಾಗಿರಿಸಿ ಸ್ಫೋಟ ನಡೆಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಮೊಹಮ್ಮದ್ ರಿಯಾಜ್ ತಿಳಿಸಿದ್ದಾರೆ. ಘಟನೆ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ.
ಪ್ರಬಲ ಸ್ಫೋಟದ ಹೊಣೆಗಾರಿಕೆಯನ್ನು ಈವರೆಗೂ ಯಾವುದೇ ಉಗ್ರಗಾಮಿ ಸಂಘಟನೆಗಳು ಹೊತ್ತಿಕೊಂಡಿಲ್ಲ. ಆದರೆ ಈ ಸ್ಫೋಟದ ಹಿಂದೆ ಪಾಕಿಸ್ತಾನದ ತಾಲಿಬಾನ್ ಕೈವಾಡ ಇರುವುದಾಗಿ ಪೊಲೀಸರು ಶಂಕಿಸಿದ್ದಾರೆ.