ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯ ಪಾಸ್‌ಪೋರ್ಟ್ ಒಪ್ಪಿಸಿದ ಎಂ.ಎಫ್. ಹುಸೇನ್ (M F Husain | Indian passport | Doha | Qatar)
Bookmark and Share Feedback Print
 
ಇತ್ತೀಚೆಗಷ್ಟೇ ಕತಾರ್ ಪೌರತ್ವ ಪಡೆದುಕೊಂಡಿದ್ದ ವಿವಾದಿತ ಕಲಾವಿದ ಎಂ.ಎಫ್. ಹುಸೇನ್, ತನ್ನ ಭಾರತೀಯ ಪಾಸ್‌ಪೋರ್ಟನ್ನು ದೋಹಾದಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಒಪ್ಪಿಸಿದ್ದಾರೆ ಎಂದು ಸೋಮವಾರ ಮಾಧ್ಯಮ ವರದಿಗಳು ಹೇಳಿವೆ.

95ರ ಹರೆಯದ ಹುಸೇನ್ ಭಾನುವಾರ ದೋಹಾದಲ್ಲಿನ ಭಾರತೀಯ ದೂತವಾಸ ಕಚೇರಿಗೆ ಹೋಗಿ ತನ್ನ ಪಾಸ್‌ಪೋರ್ಟನ್ನು ಒಪ್ಪಿಸಿದರು ಎಂದು 'ಗಲ್ಫ್ ಟೈಮ್ಸ್' ಹೇಳಿದೆ.

ಹಿಂದೂ ದೇವತೆಗಳ ನಗ್ನ ಮತ್ತು ವಿಕೃತ ಕಲಾಕೃತಿಗಳನ್ನು ರಚಿಸಿದ್ದಾರೆಂದು ಆರೋಪಿಸಿ ಭಾರತದಾದ್ಯಂತ ಹಲವು ಪ್ರಕರಣಗಳು ದಾಖಲಾದ ಬಳಿಕ ಸ್ವಯಂ ಗಡೀಪಾರುಗೊಂಡಿದ್ದ ಹುಸೇನ್, ಇತ್ತೀಚೆಗಷ್ಟೇ ಕತಾರ್ ಪೌರತ್ವವನ್ನು ಸ್ವೀಕರಿಸಿದ್ದು ತುಂಬಾ ದಿನ ಭಾರತೀಯರಾಗಿ ಉಳಿದುಕೊಳ್ಳಲಾರರು ಎಂದು ಅವರ ಪುತ್ರ ಒವಾಯಿಸ್ ಹುಸೇನ್ ಇತ್ತೀಚೆಗಷ್ಟೇ ಹೇಳಿದ್ದರು.

ಭಾರತವು ದ್ವಿಪೌರತ್ವವನ್ನು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ದೇಶದ ಪೌರತ್ವ ಸ್ವೀಕರಿಸಿದ ವ್ಯಕ್ತಿ ತನ್ನ ಭಾರತದ ಪಾಸ್‌ಪೋರ್ಟನ್ನು ಒಪ್ಪಿಸುವುದು ಕಡ್ಡಾಯ. ಅದನ್ನಷ್ಟೇ ಹುಸೇನ್ ಮಾಡಿದ್ದಾರೆ ಎಂದು ದೋಹಾದಲ್ಲಿನ ಭಾರತೀಯ ದೂತವಾಸದ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಈ ಕಲಾವಿದ 'ಭಾರತದ ಸಾಗರೋತ್ತರ ಪ್ರಜೆ' (ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ) ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಕಾರ್ಡ್ ನೀಡಲು ಅಗತ್ಯವಿರುವ ಎಲ್ಲಾ ಸಹಕಾರಗಳನ್ನೂ ದೂತವಾಸ ಒದಗಿಸಲಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಹುಸೇನ್ ಅವರು ಕತಾರ್‌ನಲ್ಲಿನ ಭಾರತೀಯ ರಾಯಭಾರಿ ದೀಪಾ ಗೋಪಾಲನ್ ವಾಧ್ವಾ ಅವರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಹುಸೇನ್ ಅವರನ್ನು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ರಾಜಕಾರಣಿಗಳು ಬಳಸಿಕೊಂಡಿದ್ದರು ಎಂದು ಸ್ವತಃ ಹುಸೇನ್ ಆರೋಪಿಸಿದ್ದರು. ಎಲ್ಲರಿಂದ ದೂಷಣೆಗೊಳಗಾಗಿದ್ದ ಸಂದರ್ಭದಲ್ಲಿ ಯಾರೂ ಹತ್ತಿರ ಬಂದಿರಲಿಲ್ಲ, ಈಗ ಮತ್ತೊಂದು ದೇಶದ ಪೌರತ್ವ ಸ್ವೀಕರಿಸಲು ಮುಂದಾದಾಗ ಸರಕಾರವು ಭದ್ರತೆ ನೀಡುವ ವಿಷಯ ಮಾತನಾಡುತ್ತಿದೆ ಎಂದು ಹುಸೇನ್ ತಿರುಗೇಟು ನೀಡಿದ್ದರು.

ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಭಾರತ, ಹುಸೇನ್ ಮರಳುವುದಾದರೆ ಸಂಪೂರ್ಣ ಭದ್ರತೆ ನೀಡಲು ಸಿದ್ಧ; ಅವರು ಭಾರತದ ಹೆಮ್ಮೆಯ ಕಲಾವಿದ ಎಂದು ಹೇಳಿತ್ತು.
ಸಂಬಂಧಿತ ಮಾಹಿತಿ ಹುಡುಕಿ