ಬರೇ ಪುರುಷರ ತುಟಿಗಳ ಮೇಲೆಯೇ ನಲಿದಾಡುತ್ತಿದ್ದ ಸಿಗರೇಟ್ ಒಂದು ಕಾಲದಲ್ಲಿ ಕ್ಯೂಬಾದ ಅಧ್ಯಕ್ಷರಾಗಿದ್ದ ಫಿಡೆಲ್ ಕ್ಯಾಸ್ಟ್ರೋ, ವಿನ್ಸ್‌ಟನ್ ಚರ್ಚಿಲ್ ಮುಂತಾದ ಘಟಾನುಘಟಿಗಳು ತಮ್ಮ ವಿಶಿಷ್ಟ ಬಗೆಯ ಸಿಗಾರ್ ಸೇದುವಿಕೆಯಿಂದ ಪುರುಷರಿಗೆ ಮೀಸಲು ಎಂಬಂತಾಗಿತ್ತು. ಆದರೆ ಈಗ ಕಾಲ ತುಂಬಾ ಬದಲಾಗ ತೊಡಗಿದ್ದು, ಮಹಿಳೆಯರಿಗಾಗಿಯೇ 'ಜುಲಿಯೇಟಾ' ಹೆಸರಿನ ಸಿಗರೇಟ್‌ನ್ನು ಕ್ಯೂಬಾ ತಯಾರಿಸಿದೆ.!
ಚಿಕ್ಕದಾದ, ತೆಳುವಾದ ಹಾಗೂ ಸಾಧಾರಣ ಬಣ್ಣದೊಂದಿಗೆ 'ಜುಲಿಯೇಟಾ' ಮಾರುಕಟ್ಟೆಗೆ ಬರಲು ಸಿದ್ದವಾಗಿದೆ. ಈ ಸಿಗರೇಟನ್ನು ಮಹಿಳೆಯರು ಸೇದುವುದರಿಂದ ಕೂಡಲೇ ಎಂಜಾಯ್ ಮಾಡಬಹುದಾಗಿದೆ ಎಂದು ಸಿಗರೇಟ್ ತಯಾರಕರು ತಿಳಿಸಿದ್ದಾರೆ.
ಕ್ಯೂಬಾದಲ್ಲಿರುವ ಸ್ಪೇನ್ ಕಂಪನಿಯಾದ ಹಾಬಾನೋಸ್ ಎಸ್‌ಎ ಕಂಪನಿ ಜುಲಿಯೇಟಾ ಸಿಗರೇಟ್ ಅನ್ನು ಮಾರ್ಚ್ ತಿಂಗಳ ಅಂತ್ಯದಲ್ಲಿ ನಡೆಯಲಿರುವ 12ನೇ ಹವಾನಾ ಸಿಗಾರ್ ಫೆಸ್ಟಿವಲ್‌ನಲ್ಲಿ ಬಿಡುಗಡೆ ಮಾಡಲಿದೆ. ಅಲ್ಲದೇ ಕ್ಯೂಬಾದಲ್ಲಿಯೇ ತಯಾರಾಗುತ್ತಿರುವ ಹೋಮ್ ಮೇಡ್ ಸಿಗರೇಟ್ ಬಗ್ಗೆ ವಿಶ್ವಾದ್ಯಂತ ಹೆಚ್ಚಿನ ಪ್ರಚಾರ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.
'ಇದು ಮಹಿಳೆಯರಿಗಾಗಿ ನೀಡಲಾಗಿರುವ ಕಾಣಿಕೆಯಾಗಿದೆ ಎಂದು ಹಾಬಾನೋಸ್ ಕಂಪನಿಯ ಉಪಾಧ್ಯಕ್ಷ ಜಾವಿಯೆರ್ ಟೆರ್ರೆಸ್, ಜುಲಿಯೇಟಾ ಸಿಗರೇಟ್ ಅನ್ನು ಮಹಿಳೆಯರಿಗಾಗಿಯೇ ಆಕರ್ಷಕವಾಗಿ ತಯಾರಿಸಲಾಗಿದೆ. ಅವರಿಗೆ ಸೇದಲು ಅನುಕೂಲವಾಗುವಂತೆ ಈ ಸಿಗರೇಟ್ 12ಸೆಂಟಿ ಮೀಟರ್(5ಇಂಚು)ನಷ್ಟು ಉದ್ದ, 1.3ಸೆಂಟಿ ಮೀಟರ್ ಸುತ್ತಳತೆಯ ದಪ್ಪ ಇರುವುದಾಗಿ ವಿವರಿಸಿದ್ದಾರೆ.
ಹವಾನಾದ ಎಲ್ ಲಾಗ್ಯೂಟೋ ಫ್ಯಾಕ್ಟರಿಯಲ್ಲಿ ನೂತನ ಲಕ್ಸುರಿ ಉತ್ಪಾದನೆಯ ಜುಲಿಯೇಟಾ ಸಿಗರೇಟ್ ತಯಾರಿಕೆಯಲ್ಲಿ ಸುಮಾರು 300ಮಹಿಳಾ ಕಾರ್ಮಿಕರೇ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೇ ಈಗಾಗಲೇ ಹಲವು ಮಹಿಳೆಯರು ನೂತನ ಸಿಗರೇಟ್‌ನ ಧಂ ಹೊಡೆದಿರುವುದಾಗಿಯೂ ಟೆರ್ರೆಸ್ ವಿವರಿಸಿದ್ದಾರೆ.
'ನನಗೆ ಧೂಮಪಾನ ತುಂಬಾ ಖುಷಿ ಕೊಡುತ್ತೆ. ಧೂಮಪಾನ ಮಾಡುವುದರಿಂದ ಮಹಿಳೆಯರಿಗೆ ಸ್ತ್ರೀತ್ವಕ್ಕೆ ಯಾವುದೇ ತೊಂದರೆಯಿಲ್ಲ' ಎಂದು 60ರ ಅಜ್ಜಿ ಮಿರಿಯಾಮ್ ಒಬ್ಲಿನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.