ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ ಅಣೆಕಟ್ಟು ಕಟ್ಟಿ ಪಾಕ್ ಮೇಲೆ ಯುದ್ಧ ಹೇರುತ್ತಿದೆ: ಸಯೀದ್ (India imposing war | Hafiz Saeed | Jamat-ud-Dawa | Pakistani rivers)
Bookmark and Share Feedback Print
 
ಅಕ್ರಮ ಅಣೆಕಟ್ಟುಗಳ ನಿರ್ಮಾಣ ಮತ್ತು ಪಾಕಿಸ್ತಾನದ ನದಿಗಳ ದಿಕ್ಕು ತಪ್ಪಿಸುವ ಮೂಲಕ ಭಾರತವು ಪಾಕಿಸ್ತಾನದ ಮೇಲೆ ಯುದ್ಧ ಹೇರಿದೆ ಎಂದು ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಆರೋಪಿಸಿದ್ದು, ಇಂತಹ ಹಗೆತನಕ್ಕೆ ಪ್ರತೀಕಾರ ತೀರಿಸಲು ಇಸ್ಲಾಮಾಬಾದ್ ಸಿದ್ಧವಾಗಬೇಕು ಎಂದು ಕರೆ ನೀಡಿದ್ದಾನೆ.

ಪಾಕಿಸ್ತಾನದ ನೀರನ್ನು ಭಾರತ ಕಳ್ಳತನ ಮಾಡಿದೆ ಎಂದು ಆರೋಪಿಸಿ ಅದರ ವಿರುದ್ಧ ಲಾಹೋರ್‌ನಲ್ಲಿ ಜಮಾತ್ ಉದ್ ದಾವಾ ಆಯೋಜಿಸಿದ್ದ ಬೃಹತ್ ರ‌್ಯಾಲಿಯಲ್ಲಿ ಮಾತನಾಡುತ್ತಿದ್ದ ಮುಂಬೈ ಭಯೋತ್ಪಾದನಾ ದಾಳಿ ರೂವಾರಿ ಸಯೀದ್, ನೀರು ಎನ್ನುವುದು ಪಾಕಿಸ್ತಾನಕ್ಕೆ ಬದುಕು ಮತ್ತು ಸಾವಿನ ಪ್ರಶ್ನೆಯಾಗಿದ್ದು ಇದರ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ.

ಆಕ್ರಮಿತ ಕಾಶ್ಮೀರದಲ್ಲಿ ದಮನಕ್ಕೊಳಗಾಗುತ್ತಿರುವ ಜನತೆಯ ಪರವಾಗಿ ದನಿಯೆತ್ತಿದ ನನ್ನನ್ನು ಆಪಾದಿತನೆಂದು ಘೋಷಿಸಲಾಗಿದೆ. ಆದರೆ ನನ್ನ ಪ್ರಾಂತ್ಯವು ಇದನ್ನು ನಡೆಸಲು ನನಗೆ ಅವಕಾಶ ನೀಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಜಮಾತ್ ಉದ್ ದಾವಾ ವಿರುದ್ಧ ನಿಷೇಧ ಹೇರುತ್ತದೆ. ಆದರೆ ಆಕ್ರಮಿತ ಕಾಶ್ಮೀರದಲ್ಲಿ ಭಾರತವು ನಡೆಸುತ್ತಿರುವ ವಿವಾದಿತ ಯೋಜನೆಯ ಕುರಿತು ಅದು ಮೌನವಾಗಿದೆ ಎಂದು ಸಯೀದ್ ಹೇಳಿದ್ದಾನೆಂದು 'ದಿ ನೇಷನ್' ಪತ್ರಿಕೆ ವರದಿ ಮಾಡಿದೆ.

ನೀರಿನ ಕೊರತೆಯಿಂದ ಪಾಕಿಸ್ತಾನವು ಕೃಷಿ ಕ್ಷೇತ್ರದಲ್ಲಿ ಭಾರೀ ತೊಂದರೆಗೊಳಗಾಗಲಿದೆ ಎಂದು ಬೆಟ್ಟು ಮಾಡಿ ತೋರಿಸಿರುವ ಸಯೀದ್, ಇದರಿಂದ ಶುದ್ಧ ಕುಡಿಯುವ ನೀರಿನ ಸಮಸ್ಯೆ ಕೂಡ ನಮಗೆ ಎದುರಾಗಲಿದೆ ಎಂದು ಹೇಳಿದ್ದಾನೆ.

ಪಾಕಿಸ್ತಾನದ ಪಂಜಾಬ್ ವಿಧಾನಸಭೆ ಮುಂದೆ ಜಮಾತ್ ಉದ್ ದಾವಾ ಸಂಘಟನೆಯ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಈ ಸಂದರ್ಭದಲ್ಲಿ ಸಯೀದ್ ಈ ರೀತಿಯಾಗಿ ಹೇಳಿದ್ದ.

ಕಾಶ್ಮೀರದಲ್ಲಿನ ನದಿಗಳಿಗೆ ಭಾರತವು ಅಣೆಕಟ್ಟುಗಳನ್ನು ನಿರ್ಮಾಣ ಮಾಡುತ್ತಿರುವುದರ ವಿರುದ್ಧ ಜಮಾತ್ ಉದ್ ದಾವಾದ ರೈತ ವಿಭಾಗವು 'ಜಲ ರ‌್ಯಾಲಿ' ಎಂಬ ಮತ್ತೊಂದು ರ‌್ಯಾಲಿಯನ್ನು ಲಾಹೋರ್‌ನಲ್ಲಿ ಆಯೋಜಿಸಿದ್ದು, ಪಾಕಿಸ್ತಾನ ಸರಕಾರವು ನೀರಿನ ಸಂರಕ್ಷಣೆಗೆ ಹೋರಾಟ ನಡೆಸಬೇಕೆಂದು ಸಂಘಟನೆ ಆಗ್ರಹಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ