ಭಾರತದ ಪೌರತ್ವವನ್ನು ಎಂ.ಎಫ್. ಹುಸೇನ್ ತೊರೆದಿದ್ದರೂ ದೇಶದ ಜತೆಗಿನ ಸಂಬಂಧಗಳನ್ನು ಕಡಿದುಕೊಳ್ಳಲು ಅವರು ಬಯಸುತ್ತಿಲ್ಲ. ಇದಕ್ಕೆ ಪೂರಕವೆನ್ನುವಂತೆ ಅವರು ಸಾಗರೋತ್ತರ ಪೌರತ್ವ ಗುರುತುಚೀಟಿಗಾಗಿ ತನ್ನ ತಾಯ್ನಾಡಿಗೆ ಅರ್ಜಿ ಸಲ್ಲಿಸಿದ್ದಾರೆ.
ಭಾರತವು ನನ್ನ ತಾಯ್ನಾಡಾಗಿದ್ದು, ಆ ದೇಶವನ್ನು ನಾನು ಸಂಪೂರ್ಣವಾಗಿ ತೊರೆಯಲಾರೆ. ಈಗ ನಾನು ಒಪ್ಪಿಸಿರುವುದು ಒಂದು ಕಾಗದದ ತುಂಡು ಮಾತ್ರ ಎಂದು ದೋಹಾದಲ್ಲಿ ತನ್ನ ಭಾರತೀಯ ಪಾಸ್‌ಪೋರ್ಟ್ ಒಪ್ಪಿಸಿದ ನಂತರ ಹುಸೇನ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದ ಕಾನೂನು ದ್ವಿಪೌರತ್ವಕ್ಕೆ ಅವಕಾಶ ನೀಡುವುದಿಲ್ಲ. ಹಾಗಾಗಿ ನಾನು ಭಾರತದ ಸಾಗರೋತ್ತರ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ನಾನು ಭಾರತದಲ್ಲಿ ಪ್ರಯಾಣ ಮಾಡುವುದನ್ನು ಮುಂದುವರಿಸುತ್ತೇನೆ. ನನ್ನ ವೃತ್ತಿಪರ ಬದ್ಧತೆಗಳನ್ನು ಪೂರ್ಣಗೊಳಿಸಲು ನಾನು ಇಲ್ಲಿನ ಪೌರತ್ವವನ್ನು ಸ್ವೀಕರಿಸಿದ್ದು, ನನ್ನ ಬೆಂಬಲಕ್ಕೆ ಬಂದಿರುವುದಕ್ಕೆ ಕತಾರ್‌ಗೆ ನಾನು ಕೃತಜ್ಞನಾಗಿದ್ದೇನೆ ಎಂದು 95ರ ಹರೆಯದ ಭಾರತ ಮೂಲದ ವಿವಾದಿತ ಕಲಾವಿತ ಪ್ರತಿಕ್ರಿಯೆ ನೀಡಿದ್ದಾರೆ.
ಹಿಂದೂ ದೇವತೆಗಳ ನಗ್ನ ಕಲಾಕೃತಿಗಳನ್ನು ರಚಿಸಿದ ಹಿನ್ನೆಲೆಯಲ್ಲಿ ನೂರಾರು ಪ್ರಕರಣಗಳನ್ನು ಅವರ ಮೇಲೆ ಹಿಂದೂ ಸಂಘಟನೆಗಳು ದಾಖಲಿಸಿದ ನಂತರ ಸ್ವಯಂ ಗಡೀಪಾರಾಗಿದ್ದ ಹುಸೇನ್, ಇತ್ತೀಚೆಗಷ್ಟೇ ಕತಾರ್ ಪೌರತ್ವವನ್ನು ಸ್ವೀಕರಿಸಿದ್ದರು.
ಕಲಾವಿದನೊಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾದಾಗ ರಕ್ಷಣೆ ನೀಡಲು ವಿಫಲವಾಗಿರುವುದು ಜಾತ್ಯತೀತ ಸರಕಾರ ಎಂದು ಹೇಳುತ್ತಿರುವ ದೇಶಕ್ಕೆ ದೊಡ್ಡ ನಷ್ಟ. ಅವರನ್ನು ಭಾರತ ಕಳೆದುಕೊಂಡಿದೆ ಎಂದು ಇಲ್ಲಿ ಮಾರ್ಕೆಟಿಂಗ್ ವೃತ್ತಿಯಲ್ಲಿರುವ ಜ್ಯೋತಿಕಾ ಕೇಂಚಾಂದಿನಿ ಅಭಿಪ್ರಾಯಪಟ್ಟಿದ್ದಾರೆ.
ಇದು ಭಾರತೀಯ ಪ್ರಜಾಪ್ರಭುತ್ವಕ್ಕೆ ಆಗಿರುವ ಅವಮಾನ. ಹುಸೇನ್ ಸಾಹೇಬರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನ್ಯಾಯವನ್ನೇ ನಿರಾಕರಿಸಲಾಗಿದೆ. ಅವರ ಹಕ್ಕುಗಳು ಮತ್ತು ಭದ್ರತೆಯ ಕುರಿತು ನಿರ್ಲಕ್ಷ್ಯ ವಹಿಸಿರುವುದಕ್ಕೆ ಭಾರತ ಸರಕಾರವು ಕ್ಷಮೆ ಯಾಚಿಸಬೇಕು ಎಂದು ಇಲ್ಲಿನ ಜೈವಿಕ ತಂತ್ರಜ್ಞಾನದ ಯುನಿವರ್ಸಿಟಿಯೊಂದರಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಮುನಾವರ್ ಆಲಿ ಖಾನ್ ತನ್ನ ಅನಿಸಿಕೆ ವ್ಯಕ್ತಪಡಿಸಿದ್ದಾರೆ.