ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅಕಾಡೆಮಿ ಅವಾರ್ಡ್ಸ್ ನಡೆಯುತ್ತಿದ್ದ ಕೊಡಾಕ್ ಥಿಯೇಟರಿಗೆ ಅಕ್ರಮವಾಗಿ ಪ್ರವೇಶಿಸಿದ ಶಂಕೆಯ ಮೇಲೆ ಲಾಸ್ ಎಂಜಲೀಸ್ ಪೊಲೀಸರು 19 ಮಂದಿಯನ್ನು ಬಂಧಿಸಿದ್ದಾರೆ.
ಅಂತಾರಾಷ್ಟ್ರೀಯ ವಲಯದಲ್ಲಿ ಪ್ರತಿಷ್ಠಿತ ಪ್ರಶಸ್ತಿಯೆಂದೇ ಕರೆಸಿಕೊಳ್ಳುವ 82ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ ನಡೆದಿತ್ತು.
ಟೆಕ್ಸಾಸ್‌ನ ಇಬ್ಬರು ಪುರುಷರು ಸೇರಿದಂತೆ ಥಿಯೇಟರಿನ ಬ್ಯಾರಿಕೇಡ್ ಹಾಕಿ ಒಳಗೆ ನುಗ್ಗಲು ಯತ್ನಿಸಿದ 19 ಮಂದಿಯನ್ನು ನಾವು ಬಂಧಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು 'ಲಾಸ್ ಎಂಜಲೀಸ್ ಟೈಮ್ಸ್' ತನ್ನ ವರದಿಯಲ್ಲಿ ಹೇಳಿದೆ.
ಎಂಟಿವಿ ನಕಲು ಗುರುತುಚೀಟಿಗಳನ್ನು ಹಿಡಿದುಕೊಂಡು ಕೆಂಪು ಹಾಸಿನೊಳಗೆ ಪ್ರವೇಶಿಸಲು ಯತ್ನಿಸಿದ ಒಂಬತ್ತು ವಿದ್ಯಾರ್ಥಿಗಳನ್ನು ಕೂಡ ಬಂಧಿಸಲಾಗಿದೆ. ಸುಮಾರು 20ರ ಹರೆಯದವರಾಗಿರುವ ಈ ವಿದ್ಯಾರ್ಥಿಗಳು, ಭದ್ರತಾ ಅಧಿಕಾರಿಗಳ ಕಣ್ತಪ್ಪಿಸಲು ಫೋಟೋ ತೆಗೆಯುತ್ತಿದ್ದ ಸಂದರ್ಭದಲ್ಲಿ ಬಂಧನಕ್ಕೊಳಗಾಗಿದ್ದಾರೆ.
60ರ ಹರೆಯದ ಬರ್ಕ್ಲೀ ವ್ಯಕ್ತಿಯೊಬ್ಬನನ್ನು ಕೂಡ ಬಂಧಿಸಲಾಗಿದೆ. ಪಾನಮತ್ತನಾಗಿದ್ದ ಈ ವ್ಯಕ್ತಿ, ತೀವ್ರವಾಗಿ ಮಿಂಚುವ ದಿರಿಸುಗಳನ್ನು ಧರಿಸಿದ್ದ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.
ಉಳಿದಂತೆ ಸುಮಾರು ಆರು ಮಂದಿಯನ್ನು ಸಮಾರಂಭ ಮುಗಿದ ನಂತರ, ಥಿಯೇಟರನ್ನು ಶುಚಿಗೊಳಿಸುತ್ತಿದ್ದ ಸಂದರ್ಭದಲ್ಲಿ ಬಂಧಿಸಲಾಗಿದೆ.
ಆಸ್ಕರ್‌ನಲ್ಲಿ ದಿ ಹರ್ಟ್ ಲಾಕರ್ ಎಂಬ ಹಾಲಿವುಡ್ ಚಿತ್ರ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿತ್ತು. ಇದು ಆರು ಪ್ರಶಸ್ತಿಗಳವನ್ನು ಬುಟ್ಟಿಗೆ ಹಾಕಿಕೊಂಡಿದೆ. ಭಾರೀ ಪ್ರಚಾರ ಗಿಟ್ಟಿಸಿದ್ದ ಅವತಾರ್ ಚಿತ್ರ ಮೂರು ಆಸ್ಕರ್ ಪ್ರಶಸ್ತಿ ಗಳಿಸಿತ್ತು.