ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಯನ್ಮಾರ್; ಪಕ್ಷ ಮತ್ತು ಚುನಾವಣೆಯಿಂದ ಸೂಕಿಗೆ ನಿಷೇಧ (Myanmar | Aung San Suu Kyi | military junta | National League for Democracy)
Bookmark and Share Feedback Print
 
ಮಯನ್ಮಾರ್‌ನಲ್ಲಿ ಇದೇ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಮಿಲಿಟರಿ ಜುಂಟಾದ ನೂತನ ಚುನಾವಣಾ ನೀತಿಗಳ ಪ್ರಕಾರ ವಿರೋಧ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿಯವರು ಚುನಾವಣೆಗೆ ಸ್ಪರ್ಧಿಸದಂತೆ ಮತ್ತು ಪಕ್ಷದ ನಾಯಕತ್ವ ವಹಿಸದಂತೆ ನಿಷೇಧ ಹೇರಲಾಗಿದೆ.

ರಾಜಕೀಯ ಪಕ್ಷಗಳ ನೂತನ ನೋಂದಣಿ ನಿಯಮಗಳನ್ನು ಬುಧವಾರ ಮಿಲಿಟರಿ ಆಡಳಿತವು ಪ್ರಕಟಿಸಿದ್ದು, ಅದರ ಪ್ರಕಾರ ಜೈಲಿನಲ್ಲಿರುವ ಯಾರಿಗೇ ಆಗಲಿ ಚುನಾವಣೆಯಲ್ಲಿ ಪಕ್ಷದ ಸದಸ್ಯರಾಗಲು ಅವಕಾಶವಿಲ್ಲ ಎಂದು ಹೇಳಲಾಗಿದೆ.

ಸೂಕಿಯವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ಎಲ್‌ಡಿ) ಪಕ್ಷವು 1990ರ ಕೊನೆಯ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತಾದರೂ, ಸೂಕಿ ಪ್ರಧಾನ ಮಂತ್ರಿಯಾಗದಂತೆ ಮಿಲಿಟರಿ ತಡೆದಿತ್ತು.

ಆ ಬಳಿಕ ಸೂಕಿಯವರನ್ನು ಗೃಹಬಂಧನದಲ್ಲಿಟ್ಟಿದ್ದ ಮಿಲಿಟರಿ ಆಡಳಿತವು, ಹಲವು ಕಾರಣಗಳನ್ನು ಮುಂದೊಡ್ಡಿ ಕಳೆದ 20 ವರ್ಷಗಳಲ್ಲಿ ಬಹುತೇಕ 14 ವರ್ಷಗಳ ಕಾಲ ಬಂಧನ ವಿಧಿಸಿದೆ.

ನಾವು ಸೂಕಿಯವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂದು ಆದೇಶ ಬಂದಿದೆ. ಈ ಕಾನೂನಿನ ಮೂಲಕ ಅವರ ನಿಲುವು ಅತ್ಯಂತ ಸ್ಪಷ್ಟವಾಗಿದೆ ಎಂದು ಸೂಕಿಯವರನ್ನು ಗೌರವಾರ್ಹ ಪದಗಳಿಂದ ಉಲ್ಲೇಖಿಸುತ್ತಾ ಎನ್‌ಎಲ್‌ಡಿ ವಕ್ತಾರ ನ್ಯಾನ್ ವಿನ್ ತಿಳಿಸಿದ್ದಾರೆ.

ಈ ಕಾನೂನನ್ನು ಕಂಡಾಗ ನಿಜಕ್ಕೂ ನನಗೆ ಆಘಾತವಾಯಿತು. ಇಷ್ಟು ಕಠಿಣವಾದ ಕಾನೂನು ಬರುತ್ತದೆ ಎಂದು ನಾನು ಯೋಚನೆ ಮಾಡಿರಲಿಲ್ಲ ಎಂದು ಅವರು ಸೂಕಿಯವರ ವಿರುದ್ಧ ಮಿಲಿಟರಿ ಆಡಳಿತ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಅಸಹಾಯಕರಾಗಿ ಪ್ರತಿಕ್ರಿಯಿಸಿದ್ದಾರೆ.

ಸೂಕಿಯವರು ಚುನಾವಣೆಗೆ ಸ್ಪರ್ಧಿಸದಂತೆ ಈ ಹಿಂದೆಯೇ ಕಾನೂನೊಂದನ್ನು ಜಾರಿಗೆ ತರಲಾಗಿತ್ತು. 2008ರಲ್ಲಿ ಅಂಗೀಕಾರ ಪಡೆದುಕೊಂಡಿದ್ದ ಈ ನೂತನ ಶಾಸನದ ಪ್ರಕಾರ ವಿದೇಶೀಯರನ್ನು ಮದುವೆಯಾಗಿರುವವರು ಅಭ್ಯರ್ಥಿಯಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.

ಸೂಕಿಯವರು ಬ್ರಿಟೀಷ್ ಶಿಕ್ಷಣ ತಜ್ಞ ಮೈಕೆಲ್ ಆರಿಸ್‌ರನ್ನು ಮದುವೆಯಾಗಿದ್ದರು. ಅವರು 1999ರಲ್ಲಿ ತೀರಿಕೊಂಡಿದ್ದಾರೆ. ಪ್ರಸಕ್ತ ಗೃಹಬಂಧನದಲ್ಲಿರುವ 64ರ ಹರೆಯದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಸೂಕಿಯವರನ್ನು ಬಿಡುಗಡೆ ಮಾಡಬೇಕೆಂದು ಹಲವು ರಾಷ್ಟ್ರಗಳು ಒತ್ತಡ ಹೇರಿದರೂ, ಅಲ್ಲಿನ ಮಿಲಿಟರಿ ಆಡಳಿತ ಜಗ್ಗುತ್ತಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ