ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಷ್ಕರ್ ಉಗ್ರರ ನೈಜ ಗುರಿ ಕಾಶ್ಮೀರವಲ್ಲ, ಭಾರತ: ಅಮೆರಿಕಾ (India | Kashmir | Pakistan | Lashkar-e-Taiba)
Bookmark and Share Feedback Print
 
ಕಾಶ್ಮೀರ ವಿವಾದಕ್ಕೆ ಸಂಬಂಧಪಟ್ಟಂತೆ ಭಾರತ ಮತ್ತು ಪಾಕಿಸ್ತಾನಗಳು ಯಾವುದೇ ಪರಿಹಾರವನ್ನು ಕೈಗೊಂಡರೂ ಅದು ಮುಂಬೈ ಭಯೋತ್ಪಾದನಾ ದಾಳಿ ನಡೆಸಿದ ಲಷ್ಕರ್ ಇ ತೋಯ್ಬಾವನ್ನು ತೃಪ್ತಿಪಡಿಸದು ಮತ್ತು ಅದರ ನಿಜವಾದ ಉದ್ದೇಶವಿರುವುದು ಕೇವಲ ಕಾಶ್ಮೀರವಲ್ಲ, ಭಾರತ ಎಂದು ಅಮೆರಿಕಾದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾಶ್ಮೀರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನ ಪರಿಹರಿಸಲು ದಾರಿಗಳನ್ನು ಹುಡುಕಬೇಕೆಂಬುದು ನನ್ನ ಮನಸ್ಸಿನಲ್ಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಿದರೂ ಲಷ್ಕರ್ ಇ ತೋಯ್ಬಾಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ನನಗನ್ನಿಸುತ್ತಿಲ್ಲ ಎಂದು 'ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್' ಸಂಘಟನೆಯ ಹಿರಿಯ ಸದಸ್ಯ ಆಶ್ಲೇ ಜೆ ಟೆಲ್ಲಿಸ್ ಅಮೆರಿಕಾ ಶಾಸಕಾಂಗಕ್ಕೆ ಗುರುವಾರ ತಿಳಿಸಿದ್ದಾರೆ.

ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿದ ಕೂಡಲೇ ಬೆದರಿಕೆಗಳು ಕಡಿಮೆಯಾಗುವುದಿಲ್ಲ. ಯಾಕೆಂದರೆ ಈ ಭಯೋತ್ಪಾದಕ ಗುಂಪುಗಳು ಪಾಕಿಸ್ತಾನದೊಳಗೆ ತಮ್ಮ ಪ್ರಭಾವವನ್ನು ಮೆರೆಯಬೇಕು ಮತ್ತು ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂಬ ಗುರಿಯನ್ನು ಇಟ್ಟುಕೊಂಡಿವೆ ಎಂದು ಅಮೆರಿಕಾದ ಅಟ್ಲಾಂಟಿಕ್ ಸಮಿತಿಯ ದಕ್ಷಿಣ ಏಷಿಯಾ ಕೇಂದ್ರದ ನಿರ್ದೇಶಕ, ಪಾಕಿಸ್ತಾನದ ಖ್ಯಾತ ವಿದ್ವಾಂಸ ಶೂಜಾ ನವಾಜ್ ಅಭಿಪ್ರಾಯಪಟ್ಟಿದ್ದಾರೆ.

ಕಾಶ್ಮೀರ ಮತ್ತು ಭಾರತವನ್ನು ಗುರಿಯಾಗಿಟ್ಟುಕೊಳ್ಳುವ ನಿರ್ದಿಷ್ಟ ಉದ್ದೇಶದಿಂದ ಪಾಕಿಸ್ತಾನದ ಐಎಸ್ಐಯಿಂದ ಆರಂಭದಲ್ಲಿ ಬೆಂಬಲ ಪಡೆದುಕೊಂಡಿದ್ದ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೋಯ್ಬಾವು ಕಾಶ್ಮೀರ ಸಮಸ್ಯೆ ಪರಿಹಾರಗೊಂಡರೆ ಭಯೋತ್ಪಾದನೆಯನ್ನು ನಿಲ್ಲಿಸುವುದೇ ಎಂಬ ಕುರಿತು ನಡೆದಿದ್ದ ಅಮೆರಿಕಾ ಶಾಸಕಾಂಗದ ಕಾರ್ಯಕ್ರಮದಲ್ಲಿ ನವಾಜ್ ಮತ್ತು ಟೆಲ್ಲಿಸ್ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು.

ಕಾಶ್ಮೀರ ಕಣಿವೆಯಲ್ಲಿ ಇಂದು ನಡೆಯುತ್ತಿರುವ ಹತ್ಯೆ ಮತ್ತು ಹಿಂಸಾಚಾರಗಳನ್ನು ನಡೆಸುತ್ತಿರುವವರು ಕಾಶ್ಮೀರಿಗಳಲ್ಲ. ವಾಸ್ತವದಲ್ಲಿ ತಮ್ಮ ರಾಜಕೀಯ ಹಕ್ಕುಗಳನ್ನು ಕಳೆದುಕೊಂಡ ಜನತೆ ಈ ಹತ್ಯಾಕಾಂಡದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಟೆಲ್ಲಿಸ್ ಹೇಳಿದ್ದಾರೆ.

ಅಲ್ಲಿ ಹತ್ಯಾಕಾಂಡಗಳನ್ನು ನಡೆಸುತ್ತಿರುವ ಗುಂಪಿಗೆ ಕಾಶ್ಮೀರದ ಜತೆ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ಕಂಡ ಪ್ರಕಾರ ಈ ಗುಂಪು ಸುಮಾರು 21 ದೇಶಗಳಲ್ಲಿ ಕಾರ್ಯಾಚರಿಸುತ್ತಿದೆ. ಅದು ಪಾಶ್ಚಾತ್ಯ, ಆಧುನಿಕತೆ, ಜಾತ್ಯತೀತತೆ ಮತ್ತು ನಾವು ಅನುಸರಿಸುತ್ತಿರುವ ಎಲ್ಲಾ ರೀತಿಯ ಮೌಲ್ಯಗಳನ್ನು ವಿರೋಧಿಸುತ್ತಿರುವ ಸಿದ್ಧಾಂತವನ್ನು ಹೊಂದಿದೆ. ಹಾಗಾಗಿ ಇದು ಕಾಶ್ಮೀರ ಸಮಸ್ಯೆ ಪರಿಹಾರವಾದ ಕೂಡಲೇ ಸಂತೃಪ್ತಿ ಹೊಂದುವ ಸಂಘಟನೆಯಲ್ಲ ಎಂದು ವಿವರಣೆ ನೀಡಿದರು.

ಲಷ್ಕರ್ ಇ ತೋಯ್ಬಾದ ನಿಜವಾದ ಗುರಿ ಇರುವುದು ಕಾಶ್ಮೀರವಲ್ಲ, ಅದು ಭಾರತ. ಅಲ್ಲದೆ ದಕ್ಷಿಣ ಏಷಿಯಾವನ್ನು ಪೂರ್ತಿಯಾಗಿ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಉದ್ದೇಶವನ್ನು ಪ್ರಕಟಿಸಲೂ ಅದು ಹಿಂದೆ ಮುಂದೆ ನೋಡದು. ಇಸ್ಲಾಮ್‌ನ ವೈರಿಗಳು ಎಂದು ಹಿಂದೂಗಳು ಮತ್ತು ಜೆವಿಶ್‌ಗಳನ್ನು ಪರಿಗಣಿಸಿರುವ ಭಯೋತ್ಪಾದಕರು, ಅವರ ವಿರುದ್ಧದ ಯುದ್ಧವನ್ನು ರಹಸ್ಯವಾಗಿಟ್ಟಿಲ್ಲ ಎಂದು ಅಮೆರಿಕಾ ಶಾಸಕಾಂಗದ ಸದಸ್ಯ ಗ್ಯಾರಿ ಅಕೆರ್ಮನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ