ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಂದಹಾರ್ ಆತ್ಮಹತ್ಯಾ ದಾಳಿಗೆ 30ಕ್ಕೂ ಹೆಚ್ಚು ಬಲಿ (Suicide attackers | Afghan city | police headquarters | Taliban)
Bookmark and Share Feedback Print
 
ತಾಲಿಬಾನ್ ಪ್ರಾಬಲ್ಯದ ಅಫಘಾನಿಸ್ತಾನದ ಕಂದಹಾರ್‌ನ ಹಲವು ಕಡೆ ತಾಲಿಬಾನ್ ಭಯೋತ್ಪಾದಕರು ನಡೆಸಿದ ಆತ್ಮಹತ್ಯಾ ದಾಳಿಗೆ 30ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಇತ್ತೀಚೆಗಷ್ಟೇ ಸುಭದ್ರಗೊಳಿಸಲಾಗಿದ್ದ ಜೈಲು, ಪೊಲೀಸ್ ಪ್ರಧಾನ ಕಚೇರಿ ಮತ್ತು ಇತರ ಎರಡು ಕಡೆ ಶನಿವಾರ ಈ ಬಾಂಬ್ ದಾಳಿಗಳು ನಡೆದಿವೆ.

ಕಾರಾಗೃಹವನ್ನೇ ಪ್ರಧಾನ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು. ಆದರೆ ಕೈದಿಗಳು ತಪ್ಪಿಸಿಕೊಂಡಿಲ್ಲ ಎಂದು ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜೈ ಅವರ ಮಲಸಹೋದರ ಅಹ್ಮದ್ ವಾಲಿ ಕರ್ಜೈ ತಿಳಿಸಿದ್ದಾರೆ.

ತನ್ನ ಮನೆಯ ಪಕ್ಕದಲ್ಲೇ ಎರಡು ಸ್ಫೋಟಗಳು ನಡೆದಿವೆ. ಆದರೆ ಇದರಿಂದ ಯಾವುದೇ ಹಾನಿಗಳು ಸಂಭವಿಸಿಲ್ಲ ಎಂದು ಕಂದಹಾರ್ ಪ್ರಾಂತೀಯ ಮಂಡಳಿಯ ಸದಸ್ಯರೂ ಆಗಿರುವ ಅಹ್ಮದ್ ವಿವರಣೆ ನೀಡಿದ್ದಾರೆ.

2008ರಲ್ಲಿ ಜೈಲಿನ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ ಕಾರಾಗೃಹದ ಪ್ರಧಾನ ದ್ವಾರವನ್ನು ಮುರಿದು ನೂರಾರು ಕ್ರಿಮಿನಲ್‌ಗಳು ಹಾಗೂ ಶಂಕಿತ ಭಯೋತ್ಪಾದಕರನ್ನು ಬಿಡಿಸಿಕೊಂಡು ಹೋಗಿದ್ದ ಉಗ್ರರ ಕೃತ್ಯದ ಬಳಿಕ ಕೆನಡಿಯನ್ ಪಡೆಗಳು ಕಾರಾಗೃಹವನ್ನು ಸಿಮೆಂಟ್ ಇಟ್ಟಿಗೆಗಳ ಮೂಲಕ ಇನ್ನಷ್ಟು ಬಲಗೊಳಿಸಿದ್ದವು ಎಂದು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಅಹ್ಮದ್ ತಿಳಿಸಿದ್ದಾರೆ.

ನಗರದ ಜನತೆಯಲ್ಲಿ ಆತಂಕ ಸೃಷ್ಟಿಸಿ, ಕಾರಾಗೃಹವನ್ನು ಬೇಧಿಸುವುದು ಅವರ ತಂತ್ರವಾಗಿತ್ತು. ಆದರೆ ಕೆನಡಿಯನ್‌ಗಳು ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದರು. ಜೈಲಿನ ಗೋಡೆಗಳು, ಪ್ರಧಾನ ದ್ವಾರವನ್ನು ಬಿಗಿಯಾಗಿ ನಿರ್ಮಾಣಗೊಳಿಸಿದ್ದ ಕಾರಣ ಈ ಬಾರಿ ಅದನ್ನು ಒಡೆಯುವುದು ದುಷ್ಕರ್ಮಿಗಳಿಗೆ ಸಾಧ್ಯವಾಗಿಲ್ಲ ಎಂದರು.

ಮತ್ತೊಂದು ಆತ್ಮಹತ್ಯಾ ದಾಳಿ ಕಂದಹಾರ್ ಪೊಲೀಸ್ ಪ್ರಧಾನ ಕಚೇರಿಯ ಮುಖ್ಯದ್ವಾರದ ಬಳಿ ನಡೆದಿದೆ. ಇದರಿಂದ ಸಾಕಷ್ಟು ಪ್ರಾಣ ಹಾನಿ ಸಂಭವಿಸಿದೆ.

ಇಲ್ಲಿ ಹಲವು ನಾಗರಿಕರು ಮೃತರಾಗಿದ್ದಾರೆ. ಇದರ ನಿಖರ ಸಂಖ್ಯೆ ಈಗಲೇ ಹೇಳಲಾಗದು ಎಂದು ಅಹ್ಮದ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ