ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಹೋರ್ ಸ್ಫೋಟದಲ್ಲಿ ಭಾರತ ಕೈವಾಡವಿಲ್ಲ; ಪಾಕ್ ಸ್ಪಷ್ಟನೆ (Lahore blasts | India | Pakistan | Shah Mehmood Qureshi)
Bookmark and Share Feedback Print
 
ಲಾಹೋರ್ ಸ್ಫೋಟದಲ್ಲಿ ವಿದೇಶಿ ಕೈವಾಡವಿದೆ ಎಂದು ಭಾರತದತ್ತ ಬೆಟ್ಟು ಮಾಡುತ್ತಾ ಕೆಲವು ರಾಜಕೀಯ ನಾಯಕರು ಮತ್ತು ಮಾಧ್ಯಮಗಳು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ, ಈ ಕುರಿತು ನಮಗೆ ಯಾವುದೇ ಪ್ರಬಲ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಮುಲ್ತಾನ್ ವಿಮಾನ ನಿಲ್ದಾಣದಲ್ಲಿ ಮಾತನಾಡುತ್ತಿದ್ದ ಖುರೇಷಿ, ಈ ಹಿಂದಿನ ವಾರದ ಶುಕ್ರವಾರ ನಡೆದ ಬಾಂಬ್ ಸ್ಫೋಟದಲ್ಲಿ ಭಾರತದ ಕೈವಾಡವಿದೆ ಎಂದು ಹೇಳುವುದು ಅಪಕ್ವ ಹೇಳಿಕೆಯಾಗಬಹುದು ಎಂದರು.

ಲಾಹೋರ್ ಸ್ಫೋಟದಲ್ಲಿ ತನ್ನ ಹೆಸರು ಕೇಳಿ ಬಂದಿದ್ದಕ್ಕೆ ಕಿಡಿ ಕಾರಿದ್ದ ಭಾರತ, ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ಪಾಕಿಸ್ತಾನ ಬಿಡಬೇಕು ಎಂದು ಆಗ್ರಹಿಸಿತ್ತು.

ಲಾಹೋರ್‌ನಲ್ಲಿ ನಡೆದಿದ್ದ ಈ ಆತ್ಮಹತ್ಯಾ ದಾಳಿಯಲ್ಲಿ 55ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 100ರಷ್ಟು ಮಂದಿ ಗಾಯಗೊಂಡಿದ್ದರು. ತಕ್ಷಣ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕಾನೂನು ಸಚಿವ ರಾಣಾ ಸನವುಲ್ಲಾಹ್, ಈ ಘಟನೆಯ ಹಿಂದೆ ಭಾರತದ 'ರಾ' (ರೀಸರ್ಚ್ ಎಂಡ್ ಅನಾಲಿಸಿಸ್ ವಿಂಗ್) ಕೈವಾಡವಿದೆ ಎಂದಿದ್ದರು.

ಇದರ ಬೆನ್ನಿಗೆ ಹೇಳಿಕೆ ನೀಡಿದ್ದ ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್, ಬುಡಕಟ್ಟು ಪ್ರದೇಶದ ಭಯೋತ್ಪಾದಕರಿಂದ ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ಗಮನಿಸಿದಾಗ ಭಾರತದ ಕೈವಾಡವಿರುವುದು ಕಂಡು ಬಂದಿದೆ ಎಂದಿದ್ದರು.

ಆದರೆ ಖುರೇಷಿಯವರು ಈ ಎಲ್ಲಾ ಹೇಳಿಕೆಗಳ ಬಿಸಿಯನ್ನು ತಗ್ಗಿಸಿದ್ದು, 'ಘಟನೆಯಲ್ಲಿ ಭಾರತವು ನೇರವಾಗಿ ಪಾಲ್ಗೊಂಡಿರುವ ಬಗ್ಗೆ ಇದುವರೆಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ' ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳ ನಡುವೆ ರಿಯಾದ್ ಮಧ್ಯಸ್ಥಿಕೆ ವಹಿಸಬೇಕೆಂದು ನವದೆಹಲಿ ಬಯಸುತ್ತಿದೆ, ಇದೇ ಕಾರಣಕ್ಕೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಇತ್ತೀಚೆಗೆ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು ಎಂಬ ವಾದವನ್ನು ಖುರೇಷಿ ತಳ್ಳಿ ಹಾಕಿದ್ದಾರೆ.

ನನ್ನನ್ನೂ ಸೌದಿ ಅರೇಬಿಯಾ ಆಹ್ವಾನಿಸಿದೆ. ಅಲ್ಲಿನ ವಿದೇಶಾಂಗ ಸಚಿವರನ್ನು ಏಪ್ರಿಲ್ 3ರಂದು ಭೇಟಿ ಮಾಡಲಿದ್ದೇನೆ. ಮನಮೋಹನ್ ಸಿಂಗ್ ಅವರ ಇತ್ತೀಚಿನ ಸೌದಿ ಅರೇಬಿಯಾ ಭೇಟಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ಆ ಸಂದರ್ಭದಲ್ಲಿ ಪಡೆಯುತ್ತೇನೆ. ನಂತರವಷ್ಟೇ ಪರಿಸ್ಥಿತಿ ತಿಳಿಯಾಗಲಿದೆ ಎಂದು ಖುರೇಷಿ ಹೇಳಿದ್ದಾರೆಂದು ದಿ ನೇಷನ್ ಪತ್ರಿಕೆ ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ