ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾರ್ಚ್ 18ರಂದು ಮುಂಬೈ ದಾಳಿ ತಪ್ಪೊಪ್ಪಿಗೆ ನೀಡಲಿರುವ ಹೆಡ್ಲಿ (American terror suspect | US court | David Headley | Mumbai terror attack)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿ ಪಿತೂರಿ ಆರೋಪದ ಮೇಲೆ ಎಫ್‌ಬಿಐ ಬಂಧನದಲ್ಲಿರುವ ಅಮೆರಿಕಾ ಪ್ರಜೆ ಡೇವಿಡ್ ಹೆಡ್ಲಿ ಮಾರ್ಚ್ 18ರಂದು ಅಮೆರಿಕಾ ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ನೀಡಲಿದ್ದಾನೆ ಎಂದು ಆತನ ವಕೀಲರು ತಿಳಿಸಿದ್ದು, ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದೆ ಎಂದು ಹೇಳಲಾಗುತ್ತಿದೆ.

ಹೌದು, ಹೆಡ್ಲಿ ಮಾರ್ಚ್ 18ರಂದು ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ನೀಡಲಿದ್ದಾನೆ ಎಂದು ಆತನ ವಕೀಲ ಜಾನ್ ಥಾಯಿಸ್ ತಿಳಿಸಿದ್ದಾರೆ.

ಹೆಡ್ಲಿ ತಾನು ತಪ್ಪಿತಸ್ಥನಲ್ಲ ಎಂದು ನೀಡಿದ್ದ ಹೇಳಿಕೆಯನ್ನು ಬದಲಾಯಿಸುತ್ತಿದ್ದಾನಾ ಎಂದು ಅವರ ವಕೀಲರಲ್ಲಿ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿರುವ ಅವರು, ಹೌದು, ಮಾರ್ಚ್ 18ರಂದು ಆತ ತಪ್ಪೊಪ್ಪಿಗೆ ಹೇಳಿಕೆ ನೀಡುತ್ತಾನೆ ಎಂದಿದ್ದಾರೆ.

ಆದರೆ ಜನವರಿ 14ರಂದು ಹೆಡ್ಲಿ ಮೇಲೆ ಹೊರಿಸಲಾಗಿದ್ದ 12 ಆರೋಪಗಳನ್ನೂ ಹೆಡ್ಲಿ ಒಪ್ಪಿಕೊಳ್ಳುತ್ತಾನೋ, ಅಥವಾ ಕೆಲವು ಪ್ರಕರಣಗಳಿಗೆ ಮಾತ್ರ ತಪ್ಪೊಪ್ಪಿಗೆ ನೀಡುತ್ತಾನೋ ಎಂಬುದನ್ನು ಖಚಿತಪಡಿಸಲು ಅಥವಾ ವಿವರಣೆ ನೀಡಲು ಥಾಯಿಸ್ ನಿರಾಕರಿಸಿದ್ದಾರೆ.

ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆ ಸದಸ್ಯ 49ರ ಹರೆಯದ ಹೆಡ್ಲಿ 'ಹೇಳಿಕೆ ಬದಲಾವಣೆ'ಗಾಗಿ ಚಿಕಾಗೋದಲ್ಲಿನ ನ್ಯಾಯಾಲಯವು ಮಾರ್ಚ್ 18ರ ದಿನವನ್ನು ನಿಗದಿಪಡಿಸಿದೆ.

2010ರ ಮಾರ್ಚ್ 18ರಂದು ಡೇವಿಡ್ ಕೋಲ್ಮನ್ ಹೆಡ್ಲಿಯ ಹೇಳಿಕೆ ಬದಲಾವಣೆ ದಿನಾಂಕವನ್ನು ಅಮೆರಿಕಾ ಜಿಲ್ಲಾ ನ್ಯಾಯಾಧೀಶ ಹ್ಯಾರಿ ಲಿನೆನ್‌ವೇಬರ್ ನಿಗದಿಪಡಿಸಿದ್ದಾರೆ ಎಂದು ನ್ಯಾಯಾಲಯದ ದಾಖಲೆ ತಿಳಿಸಿದೆ.

ಅದೇ ಹೊತ್ತಿಗೆ ಹೆಡ್ಲಿ ತಾನು ತಪ್ಪಿತಸ್ಥನಲ್ಲ ಎಂದು ನೀಡಿದ್ದ ಹೇಳಿಕೆಯನ್ನು ಬದಲಾಯಿಸುತ್ತಾನೋ ಅಥವಾ ಸರಕಾರ ಮತ್ತು ಹೆಡ್ಲಿಯ ನಡುವೆ ಒಪ್ಪಂದವೇನಾದರೂ ಏರ್ಪಟ್ಟಿದೆಯೋ ಎಂಬುದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅಮೆರಿಕಾ ಅಟಾರ್ನಿ ವಕ್ತಾರ ರಾಂಡಾಲ್ ಸಂಬಾರ್ನ್ ನಿರಾಕರಿಸಿದ್ದಾರೆ.

ಮುಂಬೈ ಭಯೋತ್ಪಾದನಾ ದಾಳಿ ಮತ್ತು ಪ್ರವಾದಿ ಮೊಹಮ್ಮದ್ ಅವರ ಕಾರ್ಟೂನ್ ಪ್ರಕಟಿಸಿದ ಡೆನ್ಮಾರ್ಕ್ ಪತ್ರಿಕೆಯ ಮೇಲಿನ ದಾಳಿಗಳಲ್ಲಿ ಸಂಚು ರೂಪಿಸಿದ ಆರೋಪ ಸೇರಿದಂತೆ ಹಲವು ಆರೋಪಗಳನ್ನು ಹೆಡ್ಲಿ ಮೇಲೆ ಹೊರಿಸಲಾಗಿದೆ.

ಈ ಸಂಬಂಧ 2009ರ ಅಕ್ಟೋಬರ್ ತಿಂಗಳಲ್ಲಿ ಬಂಧನಕ್ಕೊಳಗಾಗಿದ್ದ ಹೆಡ್ಲಿ ಈ ಹಿಂದೆ ತನ್ನ ಮೇಲಿನ ಎಲ್ಲಾ ಆರೋಪಗಳನ್ನೂ ತಳ್ಳಿ ಹಾಕಿದ್ದ. ಆದರೆ ಇದೀಗ ತಪ್ಪೊಪ್ಪಿಗೆ ನೀಡಲು ಮುಂದಾಗಿದ್ದಾನೆ ಎಂದು ಆತನ ವಕೀಲರೇ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ