ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ ಸಂಸತ್ತಿನಲ್ಲಿ ಹಿಂದೂ ಸಂಸದರಿಂದ ಸಭಾತ್ಯಾಗ (Hindu lawmakers | Parliament | Pakistan | Ramesh Lal)
Bookmark and Share Feedback Print
 
ದೇಶದಲ್ಲಿ ದಾಳಿಗಳನ್ನು ನಡೆಸಲು ಭಯೋತ್ಪಾದಕರಿಗೆ ಹಿಂದೂಗಳು ಆರ್ಥಿಕ ನೆರವು ನೀಡಿರುವ ಸಾಧ್ಯತೆಗಳಿವೆ ಎಂದು ಉನ್ನತ ನ್ಯಾಯಾಧೀಶರೊಬ್ಬರ ಆರೋಪವನ್ನು ಸಂಸತ್ತಿನಲ್ಲಿ ಪ್ರತಿಭಟಿಸಿದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಸಂಸದರು ಸಭಾತ್ಯಾಗ ನಡೆಸಿದರು.

ಲಾಹೋರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಖ್ವಾಜಾ ಮುಹಮ್ಮದ್ ಶರೀಫ್ ಅವರ ಹೇಳಿಕೆಯಿಂದ ಪಾಕಿಸ್ತಾನದ 40 ಲಕ್ಷ ಮುಸ್ಲಿಮರಿಗೆ ನೋವಾಗಿದೆ ಎಂದು ಪಾಕಿಸ್ತಾನ ಪ್ಯೂಪಲ್ಸ್ ಪಕ್ಷದ ಸಂಸದ ರಮೇಶ್ ಲಾಲ್ ರಾಷ್ಟ್ರೀಯ ಸಂಸತ್ತಿನಲ್ಲಿ ನಿನ್ನೆ ಪ್ರಸ್ತಾಪಿಸಿದರು.

ಅಫಘಾನಿಸ್ತಾನದ ತಾಲಿಬಾನ್ ಮುಖ್ಯಸ್ಥರನ್ನು ಗಡೀಪಾರು ನಿಷೇಧದ ಅರ್ಜಿಯೊಂದನ್ನು ಸೋಮವಾರ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ವಕೀಲರೊಬ್ಬರ ವಾದ 'ಅಮೆರಿಕಾದ ಭದ್ರತಾ ಸಂಸ್ಥೆ 'ಬ್ಲ್ಯಾಕ್‌ವಾಟರ್' ಮತ್ತು ಹಿಂದೂಗಳು ಭಯೋತ್ಪಾದನಾ ದಾಳಿಗಳಲ್ಲಿ ಪಾಲ್ಗೊಂಡಿದ್ದಾರೆ' ಎಂಬುದನ್ನು ತಳ್ಳಿ ಹಾಕಿದ ನ್ಯಾಯಮೂರ್ತಿ ಶರೀಫ್, 'ಪಾಕಿಸ್ತಾನದಲ್ಲಿನ ಭಯೋತ್ಪಾದನಾ ದಾಳಿಗಳಲ್ಲಿ ಪಾಲ್ಗೊಂಡದ್ದು ಹಿಂದೂಗಳಲ್ಲ, ಮುಸ್ಲಿಮರು. ಆದರೆ ಇಂತಹ ದಾಳಿಗಳಿಗೆ ಹಿಂದೂಗಳು ಆರ್ಥಿಕ ಸಹಕಾರ ನೀಡಿರುವ ಸಾಧ್ಯತೆಗಳಿವೆ' ಎಂದು ಹೇಳಿದ್ದರು.

ಒಂದು ವೇಳೆ ದೇಶವೊಂದು ಇಂತಹ ದಾಳಿಗಳಿಗೆ ಸಹಕಾರ ನೀಡುತ್ತಿದೆ ಎಂಬ ಸಂಶಯವಿದ್ದರೆ ಅದನ್ನು ಹೆಸರಿಸಬಹುದು. ಆದರೆ ದೇಶಭಕ್ತರಾಗಿರುವ ಪಾಕಿಸ್ತಾನದ ಹಿಂದೂಗಳ ಮೇಲೆ ಇಂತಹ ಆರೋಪಗಳನ್ನು ಹೊರಿಸಬಾರದು ಎಂದು ಲಾಲ್ ತಿಳಿಸಿದ್ದಾರೆ.

ನ್ಯಾಯಾಧೀಶರ ಆರೋಪದಿಂದ ಹಿಂದೂಗಳಿಗೆ ತೀವ್ರ ನೋವಾಗಿದೆ ಎಂದು ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಮತ್ತು ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿಯವರ ಗಮನಕ್ಕೂ ತಂದಿರುವ ಲಾಲ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿಯವರು ಈ ವಿಚಾರದಲ್ಲಿ ಸ್ವಯಂ ಇಚ್ಛೆಯಿಂದ ಕ್ರಮವನ್ನು ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಲವು ಸಚಿವರು ಮತ್ತು ಸಂಸದರು ಈ ಸಂದರ್ಭದಲ್ಲಿ ಲಾಲ್ ಅವರನ್ನು ಸಮಾಧಾನಗೊಳಿಸಲು ಯತ್ನಿಸಿದರೂ, ತೃಪ್ತರಾಗದ ಅವರು ಸದನದಿಂದ ಹೊರಗೆ ನಡೆದರು.

ಲಾಲ್ ಅವರಿಗೆ ಇತರ ಹಿಂದೂ ಸಂಸದರು ಮತ್ತು ಅವಾಮಿ ನ್ಯಾಷನಲ್ ಪಾರ್ಟಿ ಸದಸ್ಯರು ಸಾಥ್ ನೀಡುತ್ತಾ, ಸಭಾ ತ್ಯಾಗ ನಡೆಸಿದರು.

ಇದನ್ನು ನ್ಯಾಯಾಂಗದ ವಿರುದ್ಧ ಸಂಸತ್ತಿನಲ್ಲಿ ನಡೆಯುತ್ತಿರುವ ಮೊದಲನೇ ಪ್ರತಿಭಟನೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ