ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾನ್-ಪಾಕ್ ಗ್ಯಾಸ್ ಪೈಪ್‌ಲೈನ್ ಒಪ್ಪಂದ; ಭಾರತ ಔಟ್ (Iran | Pakistan | gas pipeline deal | India)
Bookmark and Share Feedback Print
 
ಇರಾನ್ ಮತ್ತು ಪಾಕಿಸ್ತಾನ ನೈಸರ್ಗಿಕ ಅನಿಲ ಕೊಳವೆಮಾರ್ಗದ 7.5 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದು, ಭಾರತ-ಪಾಕಿಸ್ತಾನ-ಇರಾನ್ (ಐಪಿಐ) ಯೋಜನೆಯಿಂದ ಭಾರತ ಹಿಂದಕ್ಕೆ ಸರಿದಿರುವುದು ಸ್ಪಷ್ಟವಾಗಿದೆ.

ತೈಲ ಶ್ರೀಮಂತ ರಾಷ್ಟ್ರ ಇರಾನ್‌ನಿಂದ ಇಂಧನದ ಭಾರೀ ಕೊರತೆಯನ್ನೆದುರಿಸುತ್ತಿರುವ ಪಾಕಿಸ್ತಾನದ ಮೂಲಕ ಭಾರತಕ್ಕೆ ಈ ಕೊಳವೆ ಮಾರ್ಗ ಬರಬೇಕೆಂದು ಆರಂಭದಲ್ಲಿ ಮಾತುಕತೆ ನಡೆಸಲಾಗಿತ್ತಾದರೂ, ಚೀನಾ ಪಿತೂರಿಯಿಂದ ಈ ಯೋಜನೆಯಿಂದ ಭಾರತ ಹೊರಗುಳಿಯುವಂತಾಗಿದೆ ಎಂದು ಹೇಳಲಾಗಿದೆ.

ಇಂಧನದ ಗಂಭೀರ ಕೊರತೆಯನ್ನೆದುರಿಸುತ್ತಿರುವ ಪಾಕಿಸ್ತಾನದ ಕೈಗಾರಿಕಾ ಕ್ಷೇತ್ರವು 900 ಕಿಲೋ ಮೀಟರ್ ಉದ್ದದ ಈ ಪೈಪ್‌ಲೈನ್‌ನಿಂದಾಗಿ ಸಮಾಧಾನಕೊಳ್ಳಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಚಿವ ಸೈಯದ್ ನವೀದ್ ಖಾಮರ್, ಭಾರತವು ಈ ಯೋಜನೆಯಲ್ಲಿ ಪ್ರಸಕ್ತ ಪಾಲುದಾರನಲ್ಲ ಎಂದು ತಿಳಿಸಿದ್ದಾರೆ.

ಆದರೆ ಗ್ಯಾಸ್ ಒಪ್ಪಂದದ ಮುಖ್ಯಸ್ಥರು ಪಾಕಿಸ್ತಾನದ ಮೂಲಕ ಭಾರತಕ್ಕೆ ಗ್ಯಾಸ್ ಪೂರೈಕೆಗೆ ಒಪ್ಪಿಗೆ ನೀಡಿದಲ್ಲಿ ಮತ್ತು ಈ ಯೋಜನೆಯಲ್ಲಿ ಭಾರತವೂ ಪಾಲ್ಗೊಳ್ಳಲು ನಿರ್ಧರಿಸಿದಲ್ಲಿ ಯೋಜನೆ ಭಾರತಕ್ಕೂ ವಿಸ್ತರಣೆಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಪ್ಪಂದದ ಪ್ರಮುಖ ದೇಶ ಪಾಕಿಸ್ತಾನವು ಆ ದೇಶದ ಮೂಲಕ ಭಾರತಕ್ಕೆ ಗ್ಯಾಸ್ ಪೂರೈಕೆ ಮಾಡಲು ಮುಂದಾದಲ್ಲಿ ಅದಕ್ಕೆ ತಕ್ಕುದಾದ ಪೂರೈಕಾ ದರವನ್ನು ವಿಧಿಸಲು ಸ್ವತಂತ್ರವಾಗಿರುತ್ತದೆ.

ಈ ಒಪ್ಪಂದದಂತೆ ಇರಾನ್ ಆರಂಭದಲ್ಲಿ ಪ್ರತೀ ದಿನ ಪಾಕಿಸ್ತಾನಕ್ಕೆ 30 ಮಿಲಿಯನ್ ಕ್ಯೂಬಿಕ್ ಮೀಟರ್ ಗ್ಯಾಸ್ ಸರಬರಾಜು ಮಾಡಬೇಕು. ನಂತರ ಅದನ್ನು ಪ್ರತೀ ದಿನ 60 ಮಿಲಿಯನ್ ಕ್ಯೂಬಿಕ್ ಮೀಟರ್‌ಗಳಿಗೆ ಏರಿಸಲಾಗುತ್ತದೆ.

ಇಂಧನ ಸಾಮರ್ಥ್ಯವನ್ನು ಸರಿದೂಗಿಸುವುದರೊಂದಿಗೆ ಈ ಪ್ರಾಂತ್ಯದ ಶಾಂತಿ ಮತ್ತು ಸುರಕ್ಷತೆಯನ್ನು ಬಲಪಡಿಸುವ ನಿಟ್ಟಿನಲ್ಲಿ 1990ರ ದಶಕದಲ್ಲಿ ಭಾರತ, ಪಾಕಿಸ್ತಾನ ಮತ್ತು ಇರಾನ್‌ಗಳು ಅನಿಲ ಕೊಳವೆ ಮಾರ್ಗದ ಕುರಿತು ಯೋಜನೆ ರೂಪಿಸಿದ್ದವು.

ಪಾಕಿಸ್ತಾನದ ಜತೆಗಿನ ರಾಜಕೀಯ ಭಿನ್ನಾಭಿಪ್ರಾಯದ ಹಿನ್ನಲೆಯಲ್ಲಿ ಭಾರತವು ಯೋಜನೆಯ ಕುರಿತು ಯಾವುದೇ ಮುಂದಡಿಯಿಟ್ಟಿಲ್ಲ. ಅದೇ ಹೊತ್ತಿಗೆ ಆ ಕಡೆಯಿಂದ ಚೀನಾ ಕೂಡ ಒಪ್ಪಂದದ ನಡುವೆ ಮೂಗು ತೂರಿಸಿದೆ ಎಂದು ವರದಿಗಳು ಹೇಳಿದ್ದವು.
ಸಂಬಂಧಿತ ಮಾಹಿತಿ ಹುಡುಕಿ