ದುಬೈಯ 'ಎಮಿರೇಟ್ಸ್' ವಿಮಾನ ಯಾನ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಭಾರತದ ಜೋಡಿಯೊಂದು ಅಶ್ಲೀಲ ಸಂದೇಶಗಳನ್ನು ಪರಸ್ಪರ ರವಾನಿಸಿಕೊಂಡ ಹಿನ್ನೆಲೆಯಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮಾಧ್ಯಮ ವರದಿಯೊಂದು ಗುರುವಾರ ತಿಳಿಸಿದೆ.
ವಿವಾಹೇತರ ಸಂಬಂಧ ಕಾನೂನು ಬಾಹಿರವಾಗಿರುವ ಅರಬ್ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ಉದ್ಯೋಗದಲ್ಲಿರುವ ಭಾರತೀಯ ಮಹಿಳೆ ಮತ್ತು ಪುರುಷ ಅನೈತಿಕ ಸಂಬಂಧ 'ಪಾಪ'ಕ್ಕೆ ಯೋಜನೆ ರೂಪಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಣೆ ನೀಡಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಎಮಿರೇಟ್ಸ್ ಏರ್‌ಲೈನ್ಸ್‌ನ ಕ್ಯಾಬಿನ್ ಸಿಬ್ಬಂದಿಯಾಗಿರುವ 47ರ ಹರೆಯದ ಪುರುಷ ಮತ್ತು 42ರ ಹರೆಯದ ಮಹಿಳೆಗೆ ಇದೀಗ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ ಮಹಿಳೆಯ ಪರಿತ್ಯಕ್ತ ಗಂಡ ಸಲ್ಲಿಸಿದ್ದ ವಿವಾಹ ವಿಚ್ಛೇದನ ಪ್ರಕರಣದಲ್ಲಿ ಈ ಟೆಸ್ಟ್ ಮೆಸೇಜ್ ವಿಚಾರವು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು.
ಆದರೆ ಈ ಸಂದೇಶದಲ್ಲಿ ಅವರಿಬ್ಬರು ದೈಹಿಕ ಸಂಬಂಧ ಹೊಂದಿದ್ದಾರೆ ಎಂದು ಹೇಳಲು ಸಾಕಷ್ಟು ಪುರಾವೆಗಳಿಲ್ಲ ಎಂದು ಪರಿತ್ಯಕ್ತ ಗಂಡನ ಅರ್ಜಿಯನ್ನು ತಳ್ಳಿ ಹಾಕಿದ ನ್ಯಾಯಾಲಯವು, ಜೋಡಿಗೆ ಕಠಿಣ ಶಿಕ್ಷೆಯನ್ನು ವಿಧಿಸಿದೆ.
ಡಿಸೆಂಬರ್ ತಿಂಗಳಲ್ಲೇ ಈ ಸಂಬಂಧ ತೀರ್ಪು ನೀಡಿದ್ದ ನ್ಯಾಯಾಲಯವು, ಆರು ತಿಂಗಳ ಜೈಲು ಶಿಕ್ಷೆಯ ನಂತರ ಗಡೀಪಾರು ಮಾಡುವಂತೆ ಆದೇಶ ನೀಡಿತ್ತು. ಆದರೆ ಜೋಡಿ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ಕಡಿಮೆಗೊಳಿಸಿದ್ದಲ್ಲದೆ, ದೇಶದಲ್ಲೇ ಉಳಿಯುವ ಅವಕಾಶವನ್ನು ನೀಡಿತ್ತು.
ಈ ನಡುವೆ ಕಳೆದ ವರ್ಷದ ಚುಂಬನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಾವು ಒಂದು ತಿಂಗಳ ಜೈಲು ಶಿಕ್ಷೆಗೆ ಮನವಿ ಸಲ್ಲಿಸುವುದಾಗಿ ಬ್ರಿಟೀಷ್ ಜೋಡಿ ಹೇಳಿಕೊಂಡಿದೆ.
ಬೀಚ್‌ನಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಆರೋಪಿಸಿ ಬಂಧಿಸಿದ್ದ ದುಬೈ ಪೊಲೀಸರು, ನ್ಯಾಯಾಲಯಕ್ಕೆ ಪ್ರಕರಣವನ್ನು ಕೊಂಡೊಯ್ದು ಬಳಿಕ 2008ರಲ್ಲಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಈ ಬ್ರಿಟನ್ ಜೋಡಿಗೆ ನೀಡಲಾಗಿತ್ತು. ಆದರೆ ಬಳಿಕ ಶಿಕ್ಷೆಯನ್ನು ಅಮಾನತುಗೊಳಿಸಲಾಗಿತ್ತು.