ಅಫಘಾನಿಸ್ತಾನದಲ್ಲಿನ ಸಿಐಎ ನೆಲೆ ಮೇಲಿನ ಡಿಸೆಂಬರ್‌ನ ಭಯಾನಕ ಆತ್ಮಹತ್ಯಾ ದಾಳಿಯನ್ನು ಸಂಘಟಿಸಲು ಸಹಕಾರ ನೀಡಿದ್ದಾನೆ ಎಂದು ಅಮೆರಿಕಾ ನಂಬಿರುವ ಅಲ್‌ಖೈದಾದ ಅಗ್ರ ಯೋಜನಾ ಕಾರ್ಯಕರ್ತನೊಬ್ಬ ಕಳೆದ ವಾರ ಪಾಕಿಸ್ತಾನದಲ್ಲಿ ನಡೆದ ಅಮೆರಿಕಾ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳಿಕೊಂಡಿದೆ.
ಪೂರ್ವ ಅಫಘಾನಿಸ್ತಾನದ ಖೋಸ್ತ್ ಪ್ರಾಂತ್ಯದ ಅಮೆರಿಕಾ ಯುದ್ಧ ತರಬೇತಿ ನೆಲೆಯ ಮೇಲೆ ಡಿಸೆಂಬರ್ 30ರಂದು ನಡೆದಿದ್ದ ಬಾಂಬ್ ದಾಳಿಯಲ್ಲಿ ಏಳು ಮಂದಿ ಅಮೆರಿಕಾ ಬೇಹುಗಾರಿಕಾ ಸಿಬ್ಬಂದಿಗಳು ಸಾವನ್ನಪ್ಪಿದ ನಂತರ ಪಾಕಿಸ್ತಾನದಲ್ಲಿ ತನ್ನ ಮಾನವ ರಹಿತ ವೈಮಾನಿಕ ದಾಳಿ ಮತ್ತು ಬೇಹುಗಾರಿಕಾ ಪಡೆಯನ್ನು ಅಮೆರಿಕಾ ಹೆಚ್ಚಳಗೊಳಿಸಿದೆ.
ಅಲ್‌ಖೈದಾ ಸಲಹೆಗಾರ ಮತ್ತು ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಸಹಕರಿಸುತ್ತಿದ್ದ ಹುಸೇನ್ ಆಲ್ ಯೆಮನಿ ಎಂಬಾತ ಕಳೆದ ವಾರ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದೇನೆ ಎಂಬುದು ನಮಗೆ ತಿಳಿದು ಬಂದಿದೆ ಎಂದು ಅಮೆರಿಕಾದ ಭಯೋತ್ಪಾದನಾ ವಿರೋಧಿ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಸೆಂಬರ್ 30ರಂದು ನಡೆದಿದ್ದ ಖೋಸ್ತ್ ದಾಳಿಯಲ್ಲಿ ಆತ ಪ್ರಮುಖ ಪಾತ್ರವಹಿಸಿದ್ದನೆಂದೂ ಅವರು ವಿವರಣೆ ನೀಡಿದ್ದಾರೆ.
ಖೋಸ್ತ್ ಬಾಂಬ್ ಪ್ರಕರಣವು ಸಿಐಎ ಇತಿಹಾಸದಲ್ಲಿಯೇ ಎರಡನೇ ಅತಿ ದೊಡ್ಡ ದಾಳಿಯಾಗಿತ್ತು. ಮೂಲಗಳ ಪ್ರಕಾರ ಜೋರ್ಡನ್ ಬೇಹುಗಾರಿಕಾ ಪಡೆಯಿಂದ ನೇಮಿಸಲ್ಪಟ್ಟಿದ್ದ ವ್ಯಕ್ತಿ ಅಲ್‌ಖೈದಾದ ಜತೆ ಸಂಬಂಧ ಹೊಂದುವ ಮೂಲಕ ಡಬ್ಬಲ್ ಏಜೆಂಟ್ ರೀತಿ ಕಾರ್ಯ ನಿರ್ವಹಿಸಿ ಈ ದಾಳಿಗೆ ಕಾರಣನಾಗಿದ್ದ. ಈ ದಾಳಿಯ ನಂತರ ಅಮೆರಿಕಾ ಅಧಿಕಾರಿಗಳು ಪ್ರತೀಕಾರಕ್ಕಾಗಿ ಹೆಚ್ಚು ಒಲವು ತೋರಿಸುತ್ತಿದ್ದಾರೆ.