'ಪ್ರತಿಭಟನಾಕಾರರ ಜೊತೆ ಮಾತನಾಡಲು ಸರ್ಕಾರ ಸಿದ್ದವಿದೆ ಎಂದು ಥಾಯ್‌ಲ್ಯಾಂಡ್ ಪ್ರಧಾನಿ ಗುರುವಾರ ಭರವಸೆ ನೀಡಿದ್ದು, ಆದರೆ ಬೀದಿಗಳಲ್ಲಿ ರಕ್ತ ಚೆಲ್ಲುವುದನ್ನು ಮೊದಲು ನಿಲ್ಲಿಸಬೇಕೆಂದು' ಮನವಿ ಮಾಡಿಕೊಂಡಿದ್ದಾರೆ.
ಥಾಯ್‌ಲ್ಯಾಂಡ್ ಸರ್ಕಾರದ ವಿರುದ್ಧ ಬ್ಯಾಂಕಾಕ್‌ನಾದ್ಯಂತ ಕಳೆದ ಒಂದು ವಾರದಿಂದ ಬೃಹತ್ ಪ್ರತಿಭಟನೆ ನಡೆಯುತ್ತಿತ್ತು. ಪ್ರತಿಭಟನೆಗೆ ಸರ್ಕಾರ ಜಗ್ಗದಿದ್ದಾಗ ಪ್ರತಿಭಟನಾಕಾರರು ಪ್ರಧಾನಿ ಖಾಸಗಿ ನಿವಾಸದ ಮುಂದೆ ತಮ್ಮ ರಕ್ತವನ್ನೇ ಪಾತ್ರೆಯಲ್ಲಿ ಹಾಕಿ ಚೆಲ್ಲುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು.
ಗುರುವಾರವೂ ಕೂಡ ಹತ್ತು ಸಾವಿರ ಪ್ರತಿಭಟನಾಕಾರರು ಥಾಯ್‌ನಲ್ಲಿ ಐತಿಹಾಸಿಕ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರಧಾನಿ ಅಭಿಜಿತ್ ಕೂಡಲೇ ಸಂಸತ್ ಅನ್ನು ವಿಸರ್ಜಿಸಿ ಮತ್ತೆ ಹೊಸ ಚುನಾವಣೆ ನಡೆಸುವಂತೆ ಆಗ್ರಹಿಸಿದರು. ಅಲ್ಲದೇ ಹೊಸ ಚುನಾವಣೆ ನಡೆಸುವವರೆಗೆ ಹೋರಾಟ ಮುಂದುವರಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.