ತಪ್ಪೊಪ್ಪಿಗೆ ನೀಡಿದ ಉಗ್ರ ಹೆಡ್ಲಿಗೆ ಮರಣದಂಡನೆ, ಗಡೀಪಾರಿಲ್ಲ
ಅಮೆರಿಕಾ ಡಬ್ಬಲ್ ಏಜೆಂಟ್ ಹೆಡ್ಲಿ ರಕ್ಷಣಾ ತಂತ್ರ ಯಶಸ್ವಿ
ವಾಷಿಂಗ್ಟನ್, ಶುಕ್ರವಾರ, 19 ಮಾರ್ಚ್ 2010( 09:27 IST )
PR
2008ರ ಮುಂಬೈ ಭಯೋತ್ಪಾದನಾ ದಾಳಿ ಸಂಚು ಸೇರಿದಂತೆ ತನ್ನ ಮೇಲೆ ಹೊರಿಸಲಾಗಿದ್ದ ಎಲ್ಲಾ ಆಪಾದನೆಗಳಿಗೂ ತಪ್ಪೊಪ್ಪಿಗೆ ನೀಡಿರುವ ಪಾಕಿಸ್ತಾನಿ ಸಂಜಾತ ಅಮೆರಿಕಾ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಗಿಲಾನಿ ಮರಣದಂಡನೆ ಮತ್ತು ಭಾರತ ಗಡೀಪಾರು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾನೆ. ಆದರೆ ಭಾರತ ಈತನನ್ನು ಅಮೆರಿಕಾದಲ್ಲಿ ನೇರ ವಿಚಾರಣೆ ನಡೆಸಬಹುದಾಗಿದೆ.
ಗುರುವಾರ ಚಿಕಾಗೋ ನ್ಯಾಯಾಲಯಕ್ಕೆ ಹೆಡ್ಲಿಯನ್ನು ಹಾಜರುಪಡಿಸಿದ ನಂತರ ತನ್ನ ಮೇಲಿದ್ದ ಎಲ್ಲಾ 12 ಆಪಾದನೆಗಳನ್ನು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಅಮೆರಿಕಾ ಜತೆ ಒಪ್ಪಂದವೊಂದಕ್ಕೆ ಬಂದಿರುವ ಆತನನ್ನು ಭಾರತಕ್ಕೆ ಗಡೀಪಾರು ಮಾಡಲಾಗುವುದಿಲ್ಲ ಎಂಬ ಭರವಸೆಯನ್ನು ನೀಡಲಾಗಿದೆ. ಅಲ್ಲದೆ ಉಗ್ರನಿಗೆ ಮರಣದಂಡನೆಯನ್ನೂ ವಿಧಿಸಲಾಗುತ್ತಿಲ್ಲ.
ಈ ಒಪ್ಪಂದದಂತೆ ಭಾರತದ ಅಧಿಕಾರಿಗಳು ಅಮೆರಿಕಾದಲ್ಲಿ ಹೆಡ್ಲಿಯನ್ನು ನೇರವಾಗಿ ವಿಚಾರಣೆ ನಡೆಸಬಹುದಾಗಿದೆ. ಅಮೆಲಿಕಾ ಪ್ರಾಸಿಕ್ಯೂಟರುಗಳು ಮತ್ತು ಹೆಡ್ಲಿ ನಡುವೆ ಈ ಒಪ್ಪಂದ ನಡೆಸಲಾಗಿದ್ದು, ಅಮೆರಿಕಾ ಕಸ್ಟಡಿಯಲ್ಲಿರುವಾಗಲೇ ವಿದೇಶಿ ನ್ಯಾಯಾಲಯವೊಂದರಲ್ಲಿ (ಬಹುತೇಕ ಇದು ಮುಂಬೈ ದಾಳಿ ವಿಶೇಷ ನ್ಯಾಯಾಲಯ) ಇದನ್ನು ಹೆಡ್ಲಿ ಪ್ರಮಾಣೀಕರಿಸಬೇಕಾಗುತ್ತದೆ.
ಹೆಡ್ಲಿ ತಪ್ಪೊಪ್ಪಿಗೆ ನೀಡಿರುವ 12 ಆರೋಪಗಳು.. * ಭಾರತದಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಇಡಲು ಸಂಚು. * ಭಾರತದಲ್ಲಿನ ಪ್ರಮುಖ ವ್ಯಕ್ತಿಗಳನ್ನು ಕೊಲ್ಲುವ ಮೂಲಕ ಶಕ್ತಿಗುಂದಿಸುವುದು. * ಭಾರತದಲ್ಲಿ ಅಮೆರಿಕಾ ಪ್ರಜೆಗಳನ್ನು ಕೊಲ್ಲಲು ಸಹಕಾರ ಮತ್ತು ಪ್ರಚೋದನೆ. (ಆರು ಆರೋಪ) * ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಕಚ್ಚಾವಸ್ತುಗಳ ಪೂರೈಕೆ. * ಡೆನ್ಮಾರ್ಕ್‌ನ ಪ್ರಮುಖ ವ್ಯಕ್ತಿಗಳನ್ನು ಕೊಲ್ಲುವ ಮೂಲಕ ಶಕ್ತಿಗುಂದಿಸುವುದು. * ಡೆನ್ಮಾರ್ಕ್‌ನಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಕಚ್ಚಾವಸ್ತುಗಳ ಪೂರೈಕೆ. * ಲಷ್ಕರ್ ಇ ತೋಯ್ಬಾ ಭಯೋತ್ಪಾದಕರಿಗೆ ಕಚ್ಚಾವಸ್ತುಗಳ ಪೂರೈಕೆ.
ಡಬ್ಬಲ್ ಏಜೆಂಟ್ ರಕ್ಷಿಸಿದ ಅಮೆರಿಕಾ? ಇಂತಹದ್ದೊಂದು ಆರೋಪ ಅಮೆರಿಕಾದ ಮೇಲೆ ಕಳೆದ ಹಲವಾರು ಸಮಯಗಳಿಂದ ಕೇಳಿ ಬರುತ್ತಿತ್ತು. ಇದೀಗ ಹೆಡ್ಲಿಯನ್ನು ಗಡೀಪಾರು ಮಾಡದೇ ಇರಲು ನಿರ್ಧರಿಸುವುದರೊಂದಿಗೆ ಅದು ಬಹುತೇಕ ರುಜುವಾತಾಗಿದೆ ಎಂದು ಹೇಳಲಾಗುತ್ತಿದೆ.
ಹಿಂದೊಮ್ಮೆ ಮಾದಕ ದ್ರವ್ಯ ಕಳ್ಳ ಸಾಗಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಹೆಡ್ಲಿಯನ್ನು ಅಮೆರಿಕಾ ತನ್ನ ಗುಪ್ತಚರ ಏಜೆಂಟನನ್ನಾಗಿ ಬಳಸಿಕೊಂಡಿತ್ತು. ಆದರೆ ಹೆಡ್ಲಿ ಇದರ ಜತೆ ಲಷ್ಕರ್ ಇ ತೋಯ್ಬಾಕ್ಕೂ ಸಹಕಾರ ನೀಡುತ್ತಿದ್ದ.
ಹೆಡ್ಲಿ ಅಮೆರಿಕಾ ಪರ ಏಜೆಂಟನಾಗಿ ಕೆಲಸ ಮಾಡಿದ್ದ ಎನ್ನುವುದು ಜಗತ್ತಿಗೆ ಅಧಿಕೃತವಾಗಿ ತಿಳಿಯಬಾರದು ಎಂಬ ಉದ್ದೇಶದಿಂದ ಅಮೆರಿಕಾವು ಆತನ ಜತೆ ಒಪ್ಪಂದಕ್ಕೆ ಬಂದಿದ್ದು, ಗಡೀಪಾರು ಮಾಡದೇ ಇರುವ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.
ಇದೀಗ ಅಮೆರಿಕಾ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಭಾರತಕ್ಕೆ ಹೆಡ್ಲಿಯನ್ನು ಅಲ್ಲೇ ವಿಚಾರಣೆ ನಡೆಸಬಹುದಾಗಿದೆ. ಆದರೆ ಇಲ್ಲಿ ಎಷ್ಟರ ಮಟ್ಟಿಗಿನ ಸ್ವಾತಂತ್ರ್ಯ ನೀಡಲಾಗುತ್ತದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಲು ಮಾತ್ರ ಅಮೆರಿಕಾ ಅವಕಾಶ ನೀಡಬಹುದು ಮತ್ತು ವಿಚಾರಣೆ ಸಂದರ್ಭದಲ್ಲಿ ಅಮೆರಿಕಾ ಅಧಿಕಾರಿಗಳೂ ಜತೆಗಿರಬಹುದು ಎಂಬುದು ಸಂಶಯಾತೀತವಾಗಿದೆ.