15 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಲ್‌ಟಿಟಿಇ ಮಾಜಿ ಯೋಧನೊಬ್ಬನ ಜತೆ 28ರ ಹರೆಯದ ಮಾಧವನ್ ರಂಜನಿ ಎಂಬಾಕೆ ನಿನ್ನೆ ಕಾರಾಗೃಹದಲ್ಲೇ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.
ಮದುವೆ ಹಿನ್ನೆಲೆಯಲ್ಲಿ ದೇಶದ ಅತಿ ದೊಡ್ಡ ಜೈಲಿನಲ್ಲಿ ಭಾರೀ ಸಂಭ್ರಮ ನೆಲೆಸಿತ್ತು. ತನ್ನ ಬಾಲ್ಯದ ಗೆಳೆಯನನ್ನು ಮದುವೆಯಾಗಲು ಆತ ಬಿಡುಗಡೆಯಾಗುವವರೆಗೆ ಕಾಯಲು ನಿರಾಕರಿಸಿದ ರಂಜನಿ, ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಳು.
ತನ್ನ ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಆತ ಕಳೆದ 10 ವರ್ಷಗಳ ಹಿಂದೆ ಜೀವಾವಧಿ ಶಿಕ್ಷೆಗೊಳಗಾಗಿದ್ದ 38ರ ಹರೆಯ ಮಾಜಿ ತಮಿಳು ಹುಲಿ ರಾಮಯ್ಯ ರವೀಂದ್ರನ್ ಎಂಬ ಕೈದಿಯನ್ನು ಕೊಲೊಂಬೊದ ವೆಲಿಕಾಡ ಜೈಲಿನಲ್ಲಿ ನಿನ್ನೆ ರಂಜನಿ ಮದುವೆಯಾಗಿದ್ದಾಳೆ.
ರವೀಂದ್ರನ್ ಶಿಕ್ಷೆಯ ಪ್ರಮಾಣವನ್ನು ನಂತರ ಜೀವಾವಧಿಯಿಂದ 15 ವರ್ಷಗಳಿಗೆ ಇಳಿಕೆಗೊಳಿಸಲಾಗಿತ್ತು.
ನೀಲಿ ಸೀರೆ ಉಟ್ಟುಕೊಂಡಿದ್ದ ರಂಜನಿಗೆ ಬಿಳಿ ಪೋಷಾಕಿನೊಂದಿಗಿದ್ದ ಉದ್ದುದ್ದ ಕೂದಲು ಬಿಟ್ಟಿದ್ದ ರವೀಂದ್ರನ್ ಮಾಲೆ ಹಾಕುವ ಮೂಲಕ ಮದುವೆ ನೆರವೇರಿದ್ದು, ಭಾವಚಿತ್ರಗಳನ್ನೂ ತೆಗೆಯಲಾಗಿದೆ.
ಮದುವೆ ಕಾರ್ಯಕ್ರಮದಲ್ಲಿ ಕೈದಿಗಳ ಉನ್ನತ ಅಧಿಕಾರಿಗಳು, ರೆಡ್ ಕ್ರಾಸ್ ಸದಸ್ಯರು ಮತ್ತು ಕೆಲವು ರಾಜಕೀಯ ನಾಯಕರು ಪಾಲ್ಗೊಂಡು ರವೀಂದ್ರನ್ ಬಿಡುಗಡೆಯ ನಂತರ ದಂಪತಿ ನೂತನ ಬಾಳನ್ನು ಸುಂದರವಾಗಿ ಕೈಗೊಳ್ಳಲಿ ಎಂದು ಹಾರೈಸಿದರು ಎಂದು ಮಾಧ್ಯಮ ವರದಿಗಳು ಹೇಳಿವೆ.
ಶಿಕ್ಷೆ ಕಡಿಮೆಗೊಂಡಿರುವ ಕಾರಣ ರವೀಂದ್ರನ್ 2015ರಲ್ಲಿ ಬಿಡುಗಡೆಯಾಗಲಿದ್ದಾನೆ.
19ನೇ ಶತಮಾನದ ವೆಲಿಕಾಡಾ ಜೈಲಿಗೆ ಗರಿಷ್ಠ ಭದ್ರತೆ ನೀಡಲಾಗುತ್ತಿದ್ದು, ಶ್ರೀಲಂಕಾದಲ್ಲೇ ಅತಿದೊಡ್ಡ ಜೈಲು ಇದಾಗಿದೆ. ಇದನ್ನು ಬ್ರಿಟೀಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿತ್ತು.