ಕಳೆದ 60 ವರ್ಷಗಳ ಹಿಂದೆ ಫ್ರಾನ್ಸ್‌ನಲ್ಲಿ ನಿಷೇಧಕ್ಕೊಳಗಾಗಿರುವ ವೇಶ್ಯಾಗೃಹಗಳನ್ನು ವಿಧಿವತ್ತಾಗಿಸುವಂತೆ ಅಧ್ಯಕ್ಷ ನಿಕೋಲಾಸ್ ಸರ್ಕೋಜಿಯವರ ಯುಎಂಪಿ ಪಕ್ಷದ ಸಂಸದೆಯೊಬ್ಬರು ಆಗ್ರಹಿಸಿದ್ದಾರೆ.
ಪಶ್ಚಿಮ ಪ್ಯಾರಿಸ್‌ನ ಉಪನಗರದ ಸಂಸತೆ ಚಂತಾಲ್ ಬ್ರೂನೆಲ್ ಎಂಬವರೇ ಈ ಬೇಡಿಕೆ ಮುಂದಿಟ್ಟಿರುವವರು. ಲೈಂಗಿಕ ಸಮಾನತೆಯ ರಾಷ್ಟ್ರೀಯ ವಿಚಕ್ಷಣಾ ದಳದ ಮುಖ್ಯಸ್ಥೆಯೂ ಆಗಿರುವ ಇವರ ಪ್ರಕಾರ ಲೈಂಗಿಕ ಸೇವಾ ಕೇಂದ್ರಗಳನ್ನು ತೆರೆಯುವುದರಿಂದ ಲೈಂಗಿಕ ಕಾರ್ಯಕರ್ತೆಯರಿಗೆ ಹೆಚ್ಚಿನ ಪ್ರಯೋಜನ ಸಿಗುವುದರೊಂದಿಗೆ ಅಪರಾಧ ಕೃತ್ಯಗಳು ಕೂಡ ಕಡಿಮೆಯಾಗಲಿದೆ.
1946ಕ್ಕಿಂತ ಹಿಂದಿದ್ದ ಪರಿಸ್ಥಿತಿಗೆ ಮರಳಬೇಕೆಂದು ನಾನು ಹೇಳುತ್ತಿಲ್ಲ. ವೈದ್ಯಕೀಯ, ಕಾನೂನು ಮತ್ತು ಆರ್ಥಿಕ ರಕ್ಷಣೆ ಸಾಧ್ಯವಾಗುವ ಲೈಂಗಿಕ ಸೇವೆಗಳು ಸಿಗುವ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ನಾನು ಹೇಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆಂದು 'ಲೀ ಪ್ಯಾರಿಸೆನ್' ಪತ್ರಿಕೆ ವರದಿ ಮಾಡಿದೆ.
ಕೆಲವು ಮಹಿಳಾ ವೇಶ್ಯೆಯರು ಇದಕ್ಕೆ ಬದ್ಧರಾಗಿದ್ದಾರೆ ಎನ್ನುವುದು ಸತ್ಯ. ಆದರೆ ನಾವು ಕಣ್ಣು ಮುಚ್ಚಿ ಮುಂದುವರಿಯಬಾರದು. ವೇಶ್ಯಾವಾಟಿಕೆ ಹಿಂದಿನಿಂದಲೇ ನಡೆದುಕೊಂಡು ಬಂದಿರುವಂತದ್ದು ಮತ್ತು ಮುಂದೆ ಕೂಡ ಮುಂದುವರಿಯುತ್ತದೆ ಎಂದು ಬ್ರೂನೆಲ್ ಅಭಿಪ್ರಾಯಪಟ್ಟಿದ್ದಾರೆ.
1946ರಲ್ಲಿ ನಿಷೇಧಕ್ಕೊಳಗಾಗಿದ್ದ ವೇಶ್ಯಾಗೃಹಗಳನ್ನು ಕಾನೂನುಬದ್ಧವಾಗಿ ಪುನರಾರಂಭಗೊಳಿಸಬೇಕೆಂದು ದೇಶದ ಶೇ.59ರಷ್ಟು ಮಂದಿ ಒಮ್ಮತ ಸೂಚಿಸಿದ್ದಾರೆಂದು ಸಿಎಸ್ಎ ಏಜೆನ್ಸಿ ನಡೆಸಿದ ರಾಷ್ಟ್ರೀಯ ಸಮೀಕ್ಷೆಯೊಂದು ಬಹಿರಂಗಡಿಸಿದೆ.
ಶೇ.70 ಪುರುಷರು ಮತ್ತು ಶೇ.49 ಮಹಿಳೆಯರು ಇದನ್ನು ಬೆಂಬಲಿಸಿದ್ದಾರೆ. ಶೇ.13ರಷ್ಟು ಮಹಿಳೆಯರು ಮಾತ್ರ ವೇಶ್ಯಾವಾಟಿಕೆಯನ್ನು ವಿರೋಧಿಸಿದ್ದಾರೆ. ಶೇ.38ರಷ್ಟು ಮಹಿಳೆಯರು ಯಾವುದೇ ಪ್ರತಿಕ್ರಿಯೆಗೂ ಮುಂದಾಗಿಲ್ಲ.