ರಕ್ತ ಚೆಲ್ಲಿಯಾಯ್ತು, ಈಗ ರಕ್ತದಿಂದ ಚಿತ್ರ: ಥಾಯ್ ಪ್ರತಿಭಟನೆ!
ಬ್ಯಾಂಕಾಕ್, ಶುಕ್ರವಾರ, 19 ಮಾರ್ಚ್ 2010( 18:03 IST )
ಥಾಯ್‌ಲ್ಯಾಂಡ್‌ನಲ್ಲಿ ಶೀಘ್ರವೇ ಸಂಸತ್ ಅನ್ನು ವಿಸರ್ಜಿಸಿ ನೂತನ ಚುನಾವಣೆ ನಡೆಸುವಂತೆ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಇದೀಗ ವಾರಾಂತ್ಯದಲ್ಲಿ ರಕ್ತದಿಂದ ಚಿತ್ರ ಬರೆಯುವ ತಂತ್ರ ಹೊಂದಿರುವುದಾಗಿ ತಿಳಿಸಿದ್ದಾರೆ.
ಸಂಸತ್ ಅನ್ನು ವಿಸರ್ಜಿಸಿ, ಚುನಾವಣೆ ನಡೆಸುವಂತೆ ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಇತ್ತೀಚೆಗಷ್ಟೇ ಥಾಯ್ ಪ್ರಧಾನಿಯ ಖಾಸಗಿ ನಿವಾಸದ ಮುಂದೆ 80ಗ್ಯಾಲನ್‌ನಷ್ಟು ರಕ್ತ ಚೆಲ್ಲಿ ಸರ್ಕಾರಕ್ಕೆ ಆಘಾತ ನೀಡಿದ್ದರು. ಇದೀಗ ತಮ್ಮದೇ ರಕ್ತದ ಮೂಲಕ ಚಿತ್ರ ಬಿಡಿಸುವುದಾಗಿ ಘೋಷಿಸಿದ್ದಾರೆ.
ಇದೀಗ ಶುಕ್ರವಾರ ಐತಿಹಾಸಿಕ ರಾಜಧಾನಿಯಲ್ಲಿ ಸಾವಿರಾರು ಮಂದಿ ಕೆಂಪು ವಸ್ತ್ರಧಾರಿ ಪ್ರತಿಭಟನಾಕಾರರು ಈಗಾಗಲೇ ಜಮಾಯಿಸಿದ್ದು, ಅವರೆಲ್ಲಾ ನಾಳೆ ಸೆಂಟ್ರಲ್ ಬ್ಯಾಂಕಾಕ್‌ನತ್ತ ಜಾಥಾ ಹೊರಡಲಿದ್ದಾರೆ.
ಇದೊಂದು ಬೃಹತ್ ಪ್ರಮಾಣದ ದಾರಿಗ ತಂಡವಾಗಿದ್ದು, ಇದು ಸರ್ವಾಧಿಕಾರದ ವಿರುದ್ಧದ ಹೋರಾಟ ಎಂದು ಯುನೈಟೆಡ್ ಫ್ರಂಟ್ ಫಾರ್ ಡೆಮೋಕ್ರಸಿ ಚಳವಳಿಯ ಮುಖಂಡ ಜಾಟುಪೋರ್ನ್ ಪ್ರೊಂಪಾನ್ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಸಾವಿರಾರು ವಾಹನಗಳಲ್ಲಿ ಪ್ರತಿಭಟನಾಕಾರರು ಬ್ಯಾಂಕಾಕ್‌ನತ್ತ ಜಾಥಾ ಹೊರಡಲಿದ್ದಾರೆ ಎಂದು ವಿವರಿಸಿದ್ದಾರೆ.
ಪ್ರಧಾನಿ ಅಭಿಜಿತ್ ವೆಜ್ಜಾಜಿವಾ ಅವರು ಕೂಡಲೇ ಥಾಯ್ ಸಂಸತ್ ಅನ್ನು ವಿಸರ್ಜಿಸಿ, ಹೊಸ ಚುನಾವಣೆಯನ್ನು ಘೋಷಿಸಿಬೇಕೆಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ. ಆದರೆ ಇದ್ಯಾವ ಬೇಡಿಕೆಯನ್ನು ಅಭಿಜಿತ್ ಪುರಸ್ಕರಿಸಿಲ್ಲದ ಪರಿಣಾಮ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ.