ಇಸ್ಲಾಮಾಬಾದ್, ಶುಕ್ರವಾರ, 19 ಮಾರ್ಚ್ 2010( 19:24 IST )
ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರ ಆಲ್ ಪಾಕಿಸ್ತಾನ್ ಮುಸ್ಲಿಮ್ ಲೀಗ್(ಎಪಿಎಂಎಲ್) ಹೊಸ ಹೆಸರಿನ ರಾಜಕೀಯ ಪಕ್ಷಕ್ಕೆ ಪಾಕಿಸ್ತಾನದ ಚುನಾವಣಾ ಆಯೋಗ(ಇಸಿಪಿ) ಅಧಿಕೃತವಾಗಿ ಅಂಗೀಕಾರ ನೀಡುವ ಮೂಲಕ ಮುಷರ್ರಫ್ ಅವರು ಸ್ವದೇಶಕ್ಕೆ ವಾಪಸಾಗುವುದು ಖಚಿತವಾದಂತಾಗಿದೆ.
ಮಹತ್ವದ ಬೆಳವಣಿಗೆಯಲ್ಲಿ ಮುಷರ್ರಫ್ ಅವರು ಹೊಸ ರಾಜಕೀಯ ಪಕ್ಷಕ್ಕೆ ಆಯೋಗದ ಮೂಲಕ ಅಧಿಕೃತ ಅಂಕಿತ ಪಡೆಯಲು ಕೆಲವು ಕಟ್ಟಾ ಬೆಂಬಲಿಗರೊಂದಿಗೆ ಸಾಕಷ್ಟು ಕಸರತ್ತು ನಡೆಸಿ, ಕೊನೆಗೂ ಅದರಲ್ಲಿ ಜಯಶಾಲಿಯಾಗಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಇದೀಗ ಮುಷರ್ರಫ್ ಅವರು ಅಲ್ ಪಾಕಿಸ್ತಾನ್ ಮುಸ್ಲಿಮ್ ಲೀಗ್ ಪಕ್ಷಕ್ಕೆ ಆಯೋಗದಿಂದ ಅಧಿಕೃತ ಮನ್ನಣೆ ದೊರೆತಿದೆ. ಬ್ಯಾರಿಸ್ಟರ್ ಸೈಫ್ ಎಪಿಎಂಎಲ್‌ನ ಚೇಯರ್‌ಮನ್, ಶೇರ್ ಅಲಾಂ ಖಾಟ್ಟಾಕ್ ಅಧ್ಯಕ್ಷ, ಚೌಧರಿ ಅಬ್ದುಲ್ ಗಫೂರ್ ಹಿರಿಯ ಉಪಾಧ್ಯಕ್ಷ ಹಾಗೂ ರಾಯ್ ಮುಲಾಜಾಮ್ ಹುಸೈನ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಆ ನಿಟ್ಟಿನಲ್ಲಿ ವಿದೇಶದಲ್ಲಿ ಆಹ್ವಾನಿತ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಮುಷರ್ರಫ್ ಅವರು ಪಾಕಿಸ್ತಾನಕ್ಕೆ ವಾಸಸಾಗಲಿದ್ದರೆಯೇ ಇಲ್ಲವೇ ಎಂಬ ಹಲವು ದಿನಗಳ ಗೊಂದಲಕ್ಕೆ ಇದೀಗ ತೆರೆ ಬಿದ್ದಂತಾಗಿದೆ. ಮುಷರ್ರಫ್ ದೇಶಕ್ಕೆ ವಾಪಸಾಗುವುದು ಖಚಿತ ಎಂದು ನಿವೃತ್ತ ಮೇಜರ್ ಜನರಲ್ ರಾಶಿದ್ ಖುರೇಷಿ ಖಚಿತಪಡಿಸಿದ್ದಾರೆ.
ಅಲ್ಲದೇ ಮುಷರ್ರಫ್ ಅವರ ಕಾನೂನು ಸಲಹೆಗಾರ,ವಕ್ತಾರರಾಗಿರುವ ಸೈಫ್ ಅವರು, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪಕ್ಷಕ್ಕೆ ಮುಷ್ ಅವರು ಸೇರ್ಪಡೆಗೊಳ್ಳುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ.