ಕಾಕ್‌ಪಿಟ್‌ನಲ್ಲಿದ್ದ ಪಾಕಿಸ್ತಾನದ ಪೈಲಟ್ ಒಬ್ಬ ತನಗೆ ಊಟ ಬೇಕೆಂದು ಗಗನಸಖಿಯನ್ನು ಬಾಲಿವುಡ್ ಗಾನದ ಮೂಲಕ ಕರೆದು ತೀವ್ರ ಟೀಕೆಗೆ ಗುರಿಯಾಗಿ, ಕೊನೆಗೂ ಕ್ಷಮೆ ಯಾಚಿಸಿದ ಪ್ರಸಂಗವೊಂದು ವರದಿಯಾಗಿದೆ.
ಆಗಿರುವುದು ಇಷ್ಟೇ, ಗಗನಸಖಿಗೆ ಮಾತ್ರ ಕೇಳುವಂತೆ ಹೇಳುತ್ತಿದ್ದೇನೆ ಎಂದು ಭಾವಿಸಿದ್ದ ಪೈಲಟ್‌ಗೆ ಮೈಕ್ ಆನ್ ಆಗಿರುವುದು ಗಮನಕ್ಕೆ ಬಂದಿರಲಿಲ್ಲ. ಪರಿಣಾಮ ಈತನ ಗಾನದ ಆಹ್ವಾನವನ್ನು ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೂ ಕೇಳಿದ್ದರು.
ಇಸ್ಲಾಮಾಬಾದ್‌ನಿಂದ ಕರಾಚಿಗೆ ಗುರುವಾರ ರಾತ್ರಿ ಹೋಗುತ್ತಿದ್ದ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್‌ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ.
ಪೈಲಟ್ 'ಆ ಭೀ ಜಾವೋ ಸನಮ್, ತುಜ್ ಕೋ ಮೇರಿ ಕಸಮ್' ಎಂದು ಹಾಡಿನ ಮೂಲಕ ಗಗನಸಖಿಯನ್ನು ಕರೆಯುತ್ತಿದ್ದಂತೆ ಗಗನಸಖಿ ಆಹಾರದ ತಟ್ಟೆಯೊಂದಿಗೆ ಕಾಕ್‌ಪಿಟ್‌ಗೆ ಓಡಿದ್ದಳು.
ಸ್ವಲ್ಪ ಹೊತ್ತಿಗೆ ಮುಂಚೆ ವಿಮಾನದ ಕ್ಯಾಬಿನ್ ಸಿಬ್ಬಂದಿ ಪ್ರಯಾಣಿಕರಿಗೆ ಸೂಚನೆ ನೀಡಿದ ನಂತರ ಮೈಕನ್ನು ಆಫ್ ಮಾಡಿರಲಿಲ್ಲ. ಇದರ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಪೈಲಟ್ ತನ್ನ ಗಾನಸುಧೆಯನ್ನು ಗಗನಸಖಿ ಮೇಲೆ ಹರಿಸಿದ್ದ.
ಆದರೆ ಇದರಿಂದ ಪ್ರಯಾಣಿಕರು ಅಸಮಾಧಾನಗೊಂಡಿದ್ದರು. ಅನಾಗರಿಕ ಮತ್ತು ಸಂಸ್ಕೃತಿರಹಿತ ವರ್ತನೆಗೆ ಪೈಲಟ್ ಕ್ಷಮೆ ಯಾಚಿಸಬೇಕೆಂದು ಅವರು ಆಗ್ರಹಿಸಿದರು ಎಂದು ವಾರ್ತಾವಾಹಿನಿಗಳು ವರದಿ ಮಾಡಿವೆ.
ಪ್ರಯಾಣಿಕರ ಒತ್ತಾಯಕ್ಕೆ ಮಣಿದ ಪೈಲಟ್ ಮೊದಲು ಇಂಗ್ಲೀಷಿನಲ್ಲಿ ನಂತರ ಉರ್ದುವಿನಲ್ಲಿ ಕ್ಷಮೆ ಯಾಚಿಸುವುದರೊಂದಿಗೆ ಪ್ರಕರಣ ಸುಖಾಂತ್ಯಗೊಂಡಿದೆ.