ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೇಪಾಳ ಮಾಜಿ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲಾ ಇನ್ನಿಲ್ಲ (Former Nepal PM | Girija Prasad Koirala | Kathmandu | Nepali Congress)
Bookmark and Share Feedback Print
 
ಹತ್ತು ವರ್ಷಗಳ ಆಂತರಿಕ ಕದನವನ್ನು ಶಾಂತಿ ಒಪ್ಪಂದದ ಮೂಲಕ ಕೊನೆಗೊಳಿಸಿದ್ದ ನೇಪಾಳ ಮಾಜಿ ಪ್ರಧಾನ ಮಂತ್ರಿ ಗಿರಿಜಾ ಪ್ರಸಾದ್ ಕೊಯಿರಾಲಾ ಶನಿವಾರ ಅಸ್ತಂಗತರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಶಾಂತಿಯ ಹರಿಕಾರ ಕೊಯಿರಾಲಾ ಅವರು ತನ್ನ 85ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ನೇಪಾಳಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಗೋಪಾಲ್ ಮಾನ್ ಶ್ರೇಷ್ಠ ತಿಳಿಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಉಸಿರಾಟದ ಸಮಸ್ಯೆಯನ್ನೆದುರಿಸುತ್ತಿದ್ದ ಕೊಯಿರಾಲಾ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾದ ಮೂರು ದಿನಗಳ ನಂತರ ಕಾಠ್ಮಂಡುವಿನಲ್ಲಿನ ತನ್ನ ಮಗಳ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ನೇಪಾಳ್ ಟೆಲಿವಿಷನ್ ವರದಿ ಮಾಡಿದೆ.

ಕಾಠ್ಮಂಡುವಿನ ಬಾನ್ಸ್‌ಬಾರಿಯಲ್ಲಿನ ಮಾರ್ಟಿ ಗಂಗಾ ಲಾಲ್ ಹಾರ್ಟ್ ಸೆಂಟರ್‌ನಿಂದ ಬುಧವಾರ ಬಿಡುಗಡೆಯಾಗಿದ್ದ ಕೊಯಿರಾಲಾ ಬಳಿಕ ತನ್ನ ಮಗಳ ಮನೆಯಲ್ಲಿ ಉಳಿದುಕೊಂಡಿದ್ದರು. ಬಳಿಕ ಅವರು ಅತಿಸಾರ ಸಮಸ್ಯೆಗೆ ಒಳಗಾಗಿದ್ದರು.

ಪ್ರಜಾಪ್ರಭುತ್ವ ಸರಕಾರದ ಮೊದಲ ಪ್ರಧಾನಿಯಾಗಿದ್ದ ಕೊಯಿರಾಲಾ, ನೇಪಾಳ ಕಾಂಗ್ರೆಸ್ ಅಧ್ಯಕ್ಷರಾಗಿ ಕೂಡ ಅಧಿಕಾರದಲ್ಲಿದ್ದರು. ಅವರು ಇಂದು ಬೆಳಗ್ಗಿನಿಂದಲೇ ಪ್ರಜ್ಞಾವಸ್ಥೆಯಲ್ಲಿರಲಿಲ್ಲ ಎಂದು ಉಪ ಪ್ರಧಾನಿ ಹಾಗೂ ಕೊಯಿರಾಲಾ ಪುತ್ರಿ ಸುಜಾತಾ ಕೊಯಿರಾಲಾ ಅವರ ಸಲಹೆಗಾರ ಚಿರಂಜೀವಿ ನೇಪಾಳ್ ತಿಳಿಸಿದ್ದಾರೆ.

ಮಾವೋವಾದಿ ಮುಖಂಡ ಪ್ರಚಂಡ, ಸಿಪಿಎನ್-ಯುಎಂಎಲ್ ಜಲನಾಥ್ ಖನಾಲ್ ಮುಂತಾದ ಅಗ್ರ ರಾಜಕೀಯ ನಾಯಕರು ಕೊಯಿರಾಲಾ ಅವರ ಆರೋಗ್ಯ ವಿಚಾರಿಸಲು ಇಂದು ಮುಂಜಾನೆ ಅವರ ಪುತ್ರಿಯ ಮನೆಗೆ ಭೇಟಿ ನೀಡಿದ್ದರು.

ಈ ಸಂಬಂಧ ತುರ್ತು ಸಭೆ ನಡೆಸಿದ ನೇಪಾಳಿ ಕಾಂಗ್ರೆಸ್, ಕಾಠ್ಮಂಡುವಿನಿಂದ ದೂರದಲ್ಲಿರುವ ಎಲ್ಲಾ ನಾಯಕರು ತಕ್ಷಣವೇ ರಾಜಧಾನಿಗೆ ವಾಪಸಾಗುವಂತೆ ಸೂಚನೆ ನೀಡಿದೆ.

ಐದು ಬಾರಿ ಪ್ರಧಾನ ಮಂತ್ರಿಯಾಗಿರುವ ಕೊಯಿರಾಲಾ ಅವರು ಶಾಂತಿ ಪ್ರಕ್ರಿಯೆ ಮತ್ತು ಮಾವೋವಾದಿಗಳನ್ನು ಪ್ರಮುಖ ರಾಜಕೀಯ ವಾಹಿನಿಗೆ ತರುವಲ್ಲಿ ಶ್ರಮಿಸುವ ಮೂಲಕ 16,000 ಮಂದಿಯ ಸಾವಿಗೆ ಕಾರಣವಾಗಿದ್ದ ದಶಕಗಳ ಸಂಘರ್ಷಕ್ಕೆ ತೆರೆ ಎಳೆದಿದ್ದರು.

ಅಲ್ಲದೆ ಬಳಿಕ ನೇಪಾಳವನ್ನು ಗಣತಂತ್ರ ಆಡಳಿತಕ್ಕೆ ತರುವಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದರೊಂದಿಗೆ 240 ವರ್ಷಗಳ ರಾಜಪ್ರಭುತ್ವವು ನೇಪಾಳದಲ್ಲಿ ಕಳೆದೆರಡು ವರ್ಷಗಳ ಹಿಂದೆ ಕೊನೆಗೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ