ವಾಯುವ್ಯ ಪಾಕಿಸ್ತಾನದ ಬುಡಕಟ್ಟು ಪ್ರಾಂತ್ಯ ಬಜಾವುರ್‌ನಲ್ಲಿನ ಎರಡು ಶಾಲೆಗಳನ್ನು ತಾಲಿಬಾನ್ ಪರ ಭಯೋತ್ಪಾದಕರು ಶುಕ್ರವಾರ ಸ್ಫೋಟಕ ಬಳಸಿ ಧ್ವಂಸಗೊಳಿಸಿದ್ದು, ಈ ಪ್ರಾಂತ್ಯದಲ್ಲಿ ನಾಶವಾದ ಶಾಲೆಗಳ ಸಂಖ್ಯೆ ಇದರಿಂದ 74ಕ್ಕೇರಿದಂತಾಗಿದೆ.
ಬಜಾವುರ್ ಪ್ರಾಂತ್ಯದ ಮಂಡಲ್ ಏರಿಯಾದಲ್ಲಿನ ಹುಡುಗರ ಸರಕಾರಿ ಪ್ರಾಥಮಿಕ ಶಾಲೆಯೊಳಗೆ ಸ್ಫೋಟಕಗಳನ್ನು ಇಟ್ಟು, ಬಳಿಕ ಸ್ಫೋಟಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ರೀತಿ ಗುಂಡಾಯ್‌ನಲ್ಲಿನ ಮತ್ತೊಂದು ಶಾಲೆಯನ್ನು ಕೂಡ ಉಗ್ರರು ಧ್ವಂಸಗೊಳಿಸಿದ್ದಾರೆ. ಎರಡೂ ಘಟನೆಗಳಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ.
ಈ ದಾಳಿಗಳಿಗೆ ಪ್ರಬಲ ಸ್ಫೋಟಕಗಳನ್ನು ಬಳಸಲಾಗಿದ್ದು, ಎರಡೂ ಶಾಲೆಗಳು ಸಂಪೂರ್ಣ ನೆಲಸಮಗೊಂಡಿವೆ. ಈ ಸಂಬಂಧ ತಕ್ಷಣವೇ ಕಾರ್ಯಪ್ರವೃತ್ತವಾಗಿರುವ ರಕ್ಷಣಾ ಪಡೆಗಳು ಕನಿಷ್ಠ 25 ಶಂಕಿತರನ್ನು ಬಂಧಿಸಿದ್ದಾರೆ.
ಭದ್ರತಾ ಕಾರಣಗಳಿಂದ ಮುಚ್ಚಲಾಗಿದ್ದ ಶಾಲೆಗಳನ್ನು 18 ತಿಂಗಳುಗಳ ನಂತರ ಈ ವಾರ ಮರು ಆರಂಭಗೊಳಿಸಲಾಗಿತ್ತು. ಆ ಬಳಿಕ ಬಜಾವುರ್ ಪ್ರಾಂತ್ಯದಲ್ಲಿ ಮೂರು ಶಾಲೆಗಳನ್ನು ಭಯೋತ್ಪಾದಕರು ಧ್ವಂಸಗೊಳಿಸಿದ್ದರು. ಇದೀಗ ಮತ್ತೆ ಎರಡು ಶಾಲೆಗಳನ್ನು ಉಗ್ರರು ನೆಲಸಮಗೊಳಿಸಿದ್ದಾರೆ.
ಪ್ರತ್ಯೇಕ ಘಟನೆಯೊಂದರಲ್ಲಿ ಬಜಾವುರ್ ಪ್ರಾಂತ್ಯದ ಪ್ರಧಾನ ಕಚೇರಿಯ ಬಳಿಯ ರಸ್ತೆಯಲ್ಲಿ ರಿಮೋಟ್ ಕಂಟ್ರೋಲ್ ಅಳವಡಿಸಲಾಗಿದ್ದ ಬಾಂಬ್ ಒಂದನ್ನು ರಕ್ಷಣಾ ದಳಗಳು ಪತ್ತೆ ಹಚ್ಚಿದ್ದು, ನಿಷ್ಕ್ರಿಯಗೊಳಿಸಿವೆ.