ಅಫ್ಘಾನಿಸ್ತಾನದ ಗಡಿಭಾಗದಲ್ಲಿರುವ ಪಾಕಿಸ್ತಾನದ ಪ್ರದೇಶಗಳಲ್ಲಿ ಅಡಗಿರುವ ಉಗ್ರರ ಅಡಗುತಾಣಗಳ ಮೇಲೆ, ಅಮೆರಿಕ ಎರಡು ಕ್ಷಿಪಣಿ ದಾಳಿಗಳನ್ನು ನಡೆಸಿ 8 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ವಜೀರಿಸ್ತಾನದ ಲೊವಾರಿ ಮಂಡಿ ಪ್ರದೇಶದಲ್ಲಿ, ಅವಿತಿದ್ದ ಉಗ್ರರ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ಡಿಸೆಂಬರ್ ತಿಂಗಳ ಅವಧಿಯಲ್ಲಿ, ಅಪ್ಘಾನಿಸ್ತಾನದಲ್ಲಿರುವ ಅಮೆರಿಕ ಸೈನಿಕರ ಶಿಬಿರದ ಮೇಲೆ ಆತ್ಮಾಹುತಿ ಬಾಂಬರ್ ದಾಳಿ ನಡೆಸಿ ಏಳು ಮಂದಿ ಸಿಐಎ ಅಧಿಕಾರಿಗಳನ್ನು ಹತ್ಯೆ ಮಾಡಿದ ನಂತರ, ಉತ್ತರ ವಜೀರಿಸ್ತಾನದಲ್ಲಿರುವ ಉಗ್ರಗಾಮಿ ನಾಯಕರ ಹತ್ಯೆಗೆ ಅಮೆರಿಕ ನಿರಂತರವಾಗಿ ಪ್ರಯತ್ನಿಸುತ್ತಿದೆ.
ಅಮೆರಿಕಕ್ಕೆ ಚಲನವಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂದು ಆರೋಪಿಸಿ, ಬುಡಕಟ್ಟು ಜನಾಂಗಕ್ಕೆ ಸೇರಿದ ಮೂವರು ವ್ಯಕ್ತಿಗಳನ್ನು ಉಗ್ರರು ಹತ್ಯೆ ಮಾಡಿದ್ದು,ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಕುರ್ರಂ ಮತ್ತು ಒರ್ಕಾಝೈ ಬುಡಕಟ್ಟು ಪ್ರದೇಶಗಳ ಮೇಲೆ, ಪಾಕಿಸ್ತಾನ ಸೇನಾಪಡೆಗಳು ವಾಯುದಾಳಿ ನಡೆಸಿ 16 ಉಗ್ರರನ್ನು ಹತ್ಯೆ ಮಾಡಿವೆ.ಕ್ವೆಟ್ಟಾ ಪ್ರದೇಶದಲ್ಲಿ ಪೊಲೀಸ್ ವಾಹನದ ಮೇಲೆ ಉಗ್ರರು ಎಸೆದ ಬಾಂಬ್‌ನಿಂದಾಗಿ, ಮೂವರು ಹತರಾಗಿ 18 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ.