ಅಮೆರಿಕದಲ್ಲಿ ಬಹುಚರ್ಚಿತ ಆರೋಗ್ಯ ಸೇವಾ ಮಸೂದೆ (ಹೆಲ್ತ್ ಕೇರ್ ಬಿಲ್)ಗೆ ಸಹಮತ ದಕ್ಕಿದ್ದು ಹೊಸ ಮೈಲುಗಲ್ಲನ್ನೇ ರೂಪಿಸಿದೆ. ಇದು ಅಮೆರಿಕ ಜನತೆಗೆ ಸಂದ ಜಯ ಎಂದು ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಬರಾಕ್ ಒಬಾಮಾ ವ್ಯಾಖ್ಯಾನಿಸಿದ್ದಾರೆ.
ಹೆಲ್ತ್ ಕೇರ್ ಬಿಲ್ ಖಂಡಿತಾ ಊರ್ಜಿತಗೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂದು ಹಲವು ಬುದ್ಧಿಜೀವಿಗಳು ವ್ಯಾಖ್ಯಾನಿಸುತ್ತಿದ್ದರೂ, ಕೊನೆಗೂ ಮಸೂದೆ ಫಲಪ್ರದವಾಗಿದೆ. ಅಮೆರಿಕ ಮನಸ್ಸು ಮಾಡಿದರೆ ಏನು ಮಾಡಲೂ ಸಿದ್ಧ ಎಂಬುದ್ಕಕೆ ಇದು ಸಾಕ್ಷಿ. ಇದು ಅಮೆರಿಕದಲ್ಲಿ ಪ್ರಜೆಗಳ ಆಡಳಿತವಿದೆ ಎಂಬುದಕ್ಕೆ ಹಿಡಿದ ಕನ್ನಡಿ ಎಂದು ಒಬಾಮಾ ಹರ್ಷಚಿತ್ತರಾಗಿ ಹೇಳಿದರು.
ಇದೊಂದು ಮಹತ್ವದ ಸಾಮಾಜಿಕ ಬದಲಾವಣೆಯಾಗಿದ್ದು, ಈ ಬದಲಾವಣೆ ತರಲು ಸಾಧ್ಯವಿಲ್ಲ ಎಂದೇ ನಂಬಲಾಗಿತ್ತು. ಆದರಿದು ಸಾಧ್ಯವಾಗಿದ್ದು ನನಗೆ ಅತ್ಯಂತ ಖುಷಿ ನೀಡಿದೆ ಎಂದು ಒಬಾಮಾ ವಿವರಿಸಿದರು.
ಈ ಮಸೂದೆಯಿಂದಾಗಿ ಮುಂದಿನ ಹತ್ತು ವರ್ಷಗಳಲ್ಲಿ ಬಡ ವರ್ಗದ 32 ಮಿಲಿಯನ್ ಮಂದಿಗೆ ಆರೋಗ್ಯ ಸೇವೆ ದೊರೆಯಲಿದೆ. ಇದು ಅಮೆರಿಕ ಶೇ.95 ಮಂದಿ ಜನಸಂಖ್ಯೆಯನ್ನು ಒಳಗೊಳ್ಳುತ್ತದೆ. ಈ ಮಸೂದೆಗೆ ಹಿಂದೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದನ್ನು ಜಾರಿಗೆ ತರಲು ಕಷ್ಟಸಾಧ್ಯ ಎನ್ನಲಾಗಿತ್ತು. ಶೀಘ್ರದಲ್ಲೇ ಒಬಾಮಾ ಈ ಮಸೂದೆಗೆ ಅಂತಿಮವಾಗಿ ಸಹಿ ಹಾಕಲಿದ್ದಾರೆ ಎಂದು ವೈಟ್‍ಹೌಸ್ ಮೂಲಗಳು ತಿಳಿಸಿವೆ.