ಬಾಂಗ್ಲಾದೇಶ ಆಸ್ಪತ್ರೆಯಲ್ಲಿ ಬುರ್ಖಾ ನಿಷೇಧ...!
ಢಾಕಾ, ಸೋಮವಾರ, 22 ಮಾರ್ಚ್ 2010( 19:00 IST )
ನಗರದ ಸರಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ಕಳ್ಳತನ ತಡೆಗಾಗಿ ಬುರ್ಖಾ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ರೋಗಿಗಳ ಅಥವಾ ಸಿಬ್ಬಂದಿಗಳ ಬಳಿಯಿರುವ ಮೊಬೈಲ್ ಫೋನ್‌ಗಳು ಮತ್ತು ಹಣದ ಪರ್ಸ್‌ಗಳ ಕಳ್ಳತನದಲ್ಲಿ ಹೆಚ್ಚಳವಾಗಿದ್ದರಿಂದ, ಆಸ್ಪತ್ರೆಯಲ್ಲಿ ಬುರ್ಖಾ ಧರಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಬಂಗಾಬಂಧು ಮೆಡಿಕಲ್ ಯುನಿವರ್ಸಿಟಿ ಆಸ್ಪತ್ರೆಯ ಹಿರಿಯ ಅಡಳಿತಾಧಿಕಾರಿಯಾದ ಅಬ್ದುಲ್ ಮಜಿದ್ ಭೂಯಿಯಾನ್ ತಿಳಿಸಿದ್ದಾರೆ.
ಆಸ್ಪತ್ರೆಯ ಕರ್ತವ್ಯನಿರತ ಮಹಿಳಾ ಸಿಬ್ಬಂದಿಗಳಿಗೆ, ಕೇಶರಾಶಿ ಅಥವಾ ಮುಖವನ್ನು ಮುಚ್ಚದಂತಿರುವ ಉತ್ತಮ ಗುಣಮಟ್ಟದ ವಸ್ತ್ರವನ್ನು ಧರಿಸುವಂತೆ ಆದೇಶಿಸಲಾಗಿದೆ.
ಕಳ್ಳತನದ ಹಾವಳಿ ಹೆಚ್ಚಳ ಮತ್ತು ಮಹಿಳಾ ಸಿಬ್ಬಂದಿಗಳು ತಮ್ಮ ಬದಲು ತರಬೇತಿಯಿಲ್ಲದ ಬೇರೆಯವರನ್ನು ಗುಪ್ತವಾಗಿ ಕರ್ತವ್ಯನಿರ್ವಹಣೆಗಾಗಿ ಕಳುಹಿಸುತ್ತಿರುವ ಸಂಗತಿ ಬಹಿರಂಗವಾಗಿರುವುದರಿಂದ, ಬುರ್ಖಾವನ್ನು ನಿಷೇಧಿಸುವುದು ಸೂಕ್ತ ಎನ್ನುವ ನಿರ್ಣಯಕ್ಕೆ ಬರಲಾಗಿದೆ ಎಂದು ಅಬ್ದುಲ್ ಮಾಜಿದ್ ತಿಳಿಸಿದ್ದಾರೆ.
ಕಿಕ್ಕಿರಿದು ತುಂಬಿರುವ ಬಸ್‌ನಲ್ಲಿ ಆಗಮಿಸುವ ಬುರ್ಖಾಧಾರಿ ಮಹಿಳಾ ಸಿಬ್ಬಂದಿ, ಆಸ್ಪತ್ರೆಗೆ ಆಗಮಿಸಿದ ನಂತರವೂ ಬುರ್ಖಾವನ್ನು ಬದಲಿಸದಿರುವುದರಿಂದ, ರೋಗಗಳನ್ನು ಆಸ್ಪತ್ರೆಯಲ್ಲಿ ತಂದು ಹಂಚಿದಂತಾಗುತ್ತಿದೆ ಎಂದು ವೈದ್ಯರು ಕೂಡಾ ಹೇಳಿರುವುದಾಗಿ ಹಿರಿಯ ಅಡಳಿತಾಧಿಕಾರಿಯಾದ ಅಬ್ದುಲ್ ಮಜಿದ್ ಭೂಯಿಯಾನ್ ತಿಳಿಸಿದ್ದಾರೆ.