ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಭಾರತೀಯ ಯುವತಿಯ ಮೇಲೆ ಪೊಲೀಸ್ ಅಧಿಕಾರಿ ಅತ್ಯಾಚಾರವೆಸಗಿರುವುದನ್ನು ಖಂಡಿಸಿ, ಗುಂಪೊಂದು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದಾಗ ಹಿಂಸಾಚಾರ ಉಲ್ಬಣಿಸಿದೆ ಎಂದು ಮೂಲಗಳು ತಿಳಿಸಿವೆ.
ಬಿಹಾರ್ ಮೂಲದ ಹಿಂದೂ ಸಮುದಾಯಕ್ಕೆ ಸೇರಿದ 18 ವರ್ಷದ ಯುವತಿ, ಮನೆಯವರ ವಿರೋಧದಿಂದಾಗಿ ತನ್ನ ಪ್ರಿಯಕರನೊಂದಿಗೆ ಮದುವೆ ಮಾಡಿಕೊಳ್ಳಲು ನೇಪಾಳದ ಗಡಿಯ ಮೂಲಕ ಧನಿಷಾ ಜಿಲ್ಲೆಯ ಮಂದಿರಗಳ ಪಟ್ಟಣವಾದ ಜನಕಾಪುರ್‌ಗೆ ಆಗಮಿಸಿದ್ದಳು.
ಭಾರತದಿಂದ ಪ್ರತಿ ವರ್ಷ ಸಾವಿರಾರು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವ ಜಾನಕಿ ಮಂದಿರದಲ್ಲಿ ಮದುವೆಯಾಗಲು ಪ್ರೇಮಿಗಳು ನಿರ್ಧರಿಸಿದ್ದ್ರರು.ಜನಕಾಪುರ್ ರೈಲ್ವೆ ನಿಲ್ದಾಣದ ಬಳಿಯಿರುವ ಮನಕಾಮನಾ ವಸತಿ ಗೃಹದಲ್ಲಿ ಉಳಿದುಕೊಂಡಾಗ, ಕೋಣೆಯನ್ನು ಅನಧಿಕೃತವಾಗಿ ಪ್ರವೇಶಿಸಿದ ಪೊಲೀಸ್ ಅಧಿಕಾರಿ ಬಾಬುರಾಮ್ ಝಾ, ಯುವಕನನ್ನು ಮನಬಂದಂತೆ ಥಳಿಸಿ ಯುವಕನ ಸಮ್ಮುಖದಲ್ಲಿಯೇ ಯುವತಿಯ ಮೇಲೆ ಅತ್ಯಾಚಾರವೆಸಗಿದನು ಎಂದು ಮೂಲಗಳು ತಿಳಿಸಿವೆ.
ಸುದ್ದಿ ಹರಡುತ್ತಿದ್ದಂತೆ ಅಕ್ರೋಶಗೊಂಡ ಸ್ಥಳೀಯರು, ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಾಟ ನಡೆಸಿದಾಗ 8 ಪೊಲೀಸರು ಸೇರಿದಂತೆ ಹಲವಾರು ಮಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತಂತೆ, ನೈತಿಕ ಹೊಣೆ ಹೊತ್ತು ಗೃಹ ಸಚಿವ ಭೀಮ್ ರಾವಲ್ ರಾಜೀನಾಮೆ ನೀಡುವಂತೆ, ಹಲವಾರು ರಾಜಕೀಯ ಪಕ್ಷಗಳು ಒತ್ತಾಯಿಸಿವೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಅಶ್ರವಾಯ ಶೆಲ್‌ಗಳನ್ನು ಸಿಡಿಸಿದಾಗ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅತ್ಯಾಚಾರ ವೆಸಗಿದ ಆರೋಪಿ ಸಬ್-ಇನ್ಸಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದ್ದು, ಘಟನೆಯ ತನಿಖೆಗೆಗಾಗಿ ಸಮಿತಿಯನ್ನು ರಚಿಸಲಾಗಿದೆ.
ಆದರೆ, ಘಟನೆಯ ನಂತರ ಪ್ರೇಮಿಗಳು ಅಜ್ಞಾತ ಸ್ಥಳಕ್ಕೆ ತೆರಳಿದ್ದು,ಅವರ ಎಲ್ಲಿದ್ದಾರೆ ಎನ್ನುವ ಬಗ್ಗೆ ಮಾಹಿತಿಯಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.