ಪಾಕಿಸ್ತಾನವನ್ನು ಛಿಧ್ರಗೊಳಿಸುವ ಶತ್ರುಗಳಲ್ಲಿ ಭಾರತ ಕೂಡಾ ಸೇರಿದೆ ಎಂದು ಆಂತರಿಕ ವ್ಯವಹಾರಗಳ ಸಚಿವ ರೆಹ್ಮಾನ್ ಮಲಿಕ್ ಆರೋಪಿಸಿದ್ದಾರೆ.
ಸಂಸತ್ತಿನ ಮೇಲ್ಮನೆ ಸದನದಲ್ಲಿ ಮಾತನಾಡಿದ ಮಲಿಕ್, ಬಲೂಚಿಸ್ತಾನ್ ಪ್ರಾಂತ್ಯವನ್ನು ಸಾಫ್ಟ್ ಟಾರ್ಗೆಟ್ ಮಾಡಿಕೊಂಡ ಪಾಕಿಸ್ತಾನ ವಿರೋಧಿ ರಾಷ್ಟ್ರಗಳು, ದೇಶವನ್ನು ಒಡೆಯುವ ಸಂಚು ರೂಪಿಸಿವೆ ಎಂದು ಕಿಡಿಕಾರಿದ್ದಾರೆ.
ಹೌದು,ಪಾಕಿಸ್ತಾನವನ್ನು ಒಡೆಯಲು ಭಾರತ ನಿರಂತರವಾಗಿ ಪ್ರಯತ್ನಿಸುತ್ತಿದೆ. ಭಾರತ ಉಗ್ರರಿಗೆ ತರಬೇತಿ ನೀಡುತ್ತಿರುವುದು, ಪಾಕಿಸ್ತಾನಕ್ಕೆ ತೆರಳಿದ ನಂತರ ಯಾವ ಕೃತ್ಯಗಳಲ್ಲಿ ತೊಡಗಬೇಕು ಎಂದು ರಹಸ್ಯ ಕಾರ್ಯಾಚರಣೆ ನಡೆಸುತ್ತಿರುವ ಸಂಪೂರ್ಣ ವರದಿಗಳು ಸರಕಾರಕ್ಕೆ ಲಭ್ಯವಾಗಿವೆ ಎಂದು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ವಿರೋಧಿಗಳ ಸಂಚು ಬಹುದೊಡ್ಡ ಬೆದರಿಕೆಯಾಗಿದ್ದು, ದೇಶದ ಏಕತೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಕಾರ್ಯನಿರ್ವಹಿಸಬೇಕಾಗಿದೆ. ನಾವೆಲ್ಲರು ಒಂದಾಗಿ ದೇಶಕ್ಕೆ ಒಳಿತಾಗುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.
ಪಾಕಿಸ್ತಾನವನ್ನು ಛಿಧ್ರಗೊಳಿಸುವ ವಿದೇಶಿ ರಾಷ್ಟ್ರಗಳ ಬಗ್ಗೆ, ಇತ್ತೀಚೆಗೆ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ ಅಫ್ಘನ್ ಅಧ್ಯಕ್ಷ ಹಮೀದ್ ಕರ್ಜೈಯವರಿಗೆ ಮಾಹಿತಿ ನೀಡಲಾಗಿದೆ ಎಂದು ಮಲಿಕ್ ತಿಳಿಸಿದ್ದಾರೆ
ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿ ಹಾಗೂ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದ ಘಟನೆಗಳಲ್ಲಿ ಭಾರತದ ಕೈವಾಡವಿದೆ ಎಂದು ಕೆಲ ತಿಂಗಳುಗಳಿಂದ ಮಲಿಕ್ ಆರೋಪಿಸುತ್ತಾ ಬಂದಿದ್ದಾರೆ.