ಹಿಮಪಾತದಿಂದಾಗಿ ಅಫ್ಘಾನಿಸ್ತಾನ ಈಶಾನ್ಯ ದಿಕ್ಕಿನ ಬದಕ್ಶನ್ ಪ್ರದೇಶದಲ್ಲಿ ಸುಮಾರು 35ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಭಾರೀ ಪ್ರಮಾಣದ ಹಿಮಪಾತದಿಂದಾಗಿ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ತೀವ್ರತರದ ಘಾಸಿಗಳಾಗಿದ್ದು ಐದು ಮಂದಿಗೆ ಗಾಯಗಳಾಗಿವೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಪರ್ವತ ಪ್ರದೇಶವಾದ ಅರ್ಗೋಂರ್ಖಾ ಜಿಲ್ಲೆಯಲ್ಲಿ ಕೆಲವು ವಾರಗಳಿಂದ ಪ್ರಕೃತಿ ಮುನಿದಿದ್ದು, ತೀವ್ರ ಸ್ವರೂಪದ ಹಿಮಪಾತ ಆರಂಭವಾಗಿದೆ. ಮನೆಗಳಿಂದ ಹೊರ ನಡೆಯುವುದೇ ಅಸಂಭವವಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಕಳೆದ ಕೆಲವು ದಿನಗಳಿಂದ 35ಕ್ಕೂ ಹೆಚ್ಚು ಮಕ್ಕಳು, ಹೆಂಗಸರು ಮೃತಪಟ್ಟಿದ್ದಾರೆ ಎಂದು ಸ್ಥಲೀಯ ಪತ್ರಿಕೆಗಳು ವರದಿ ಮಾಡಿವೆ.
70ಕ್ಕೂ ಹೆಚ್ಚು ಮಂದಿ ಈ ಪ್ರದೇಶದಲ್ಲಿ ವಿಪರೀತ ಚಳಿಯಿಂದ ಕಂಗೆಟ್ಟಿದ್ದು, ಕಾಬೂಲ್‌ನಿಂದ 85 ಕಿಮೀ ದೂರದಲ್ಲಿರುವ ಸಲಾಂಗ್ ಪಾಸ್ ಕಣಿವೆ ಪ್ರದೇಶದ ಸುತ್ತಮುತ್ತಲ ಪ್ರದೇಶದಲ್ಲಿ ಕೆಲ ತಿಂಗಳ ಹಿಂದೆ 200ಕ್ಕೂ ಹೆಚ್ಚು ಮಂದಿ ಮೃತರಾಗಿದ್ದರು ಎನ್ನಲಾಗಿದೆ.