ಅಡಾಲ್ಪ್ ಹಿಟ್ಲರ್ ಅವರೇ ಬರೆದ ಪತ್ರವೊಂದುಹರಾಜು ಪ್ರಕ್ರಿಯೆಯಲ್ಲಿ ಇದೀಗ 8,000 ಪೌಂಡ್‌ಗಳಿಗೆ ಮಾರಾಟಗೊಂಡಿದೆ.
ಜರ್ಮನಿ ಹಾಗೂ ಬ್ರಿಟನ್ ನಡುವೆ ಸಾಮರಸ್ಯ ಬಯಸಿ ಹಿಟ್ಲರ್ ಈ ಪತ್ರವನ್ನು 1931ರ ಸೆಪ್ಟೆಂಬರ್ 30ರಂದು ಬರೆದಿದ್ದರು. ಈ ನಾಝಿ ಸರ್ವಾಧಿಕಾರಿ ಬ್ರಿಟೀಶ್ ಪತ್ರಕರ್ತರಾದ ಸೆಫ್ಟನ್ ಡೆಲ್ಮರ್ ಅವರು ಬ್ರಿಟನ್ ಎದುರಿಸುತ್ತಿರುವ ಆರ್ಥಿಕ ಕುಸಿತ ಸಮಸ್ಯೆ ಬಗ್ಗೆ ಬರೆಯುವಂತೆ ಕೋರಿದ್ದ ಸಂದರ್ಭದಲ್ಲಿ ಉತ್ತರಿಸಿ ಈ ಒಂದು ಪುಟದ ಪತ್ರವನ್ನು ಬರೆದಿದ್ದರು.
ಬ್ರಿಟೀಶ್ ಜನತೆ ನನ್ನ ಬಗ್ಗೆ ಸರಿಯಾಗಿ ಅರಿಯದೆ ನಿರ್ಧಾರಕ್ಕೆ ಬಂದುಬಿಟ್ಟರು ಎಂದು ಬರೆದಿರುವ ಹಿಟ್ಲರ್ ಬ್ರಿಟನ್ ಬಗ್ಗೆ ತನಗಿರುವ ಮೃದು ಧೋರಣೆಯನ್ನು ಪತ್ರದ ಮೂಲಕ ಟೈಪ್ ಮಾಡಿದ್ದರು.
ಮೊದಲ ವಿಶ್ವಯುದ್ಧದ ನಂತರ ಬ್ರಿಟನ್ ಹಾಗೂ ಜರ್ಮನಿ ನಡುವಿನಲ್ಲಿ ಹೊಸ ಬೆಳಕು ಕಾಣಿಸಿಕೊಳ್ಳುವ ಆಸೆಯನ್ನು ಈ ಮೂಲಕ ವ್ಯಕ್ತಪಡಿಸಿದ್ದರು. ಬ್ರಿಟನ್ ತನ್ನ ಆರ್ಥಿಕ ಹಿಂಜರಿತವನ್ನು ಸೂಕ್ತವಾಗಿ ಎದುರಿಸಿ ಮುಂದಿನ ದಿನಗಳಲ್ಲಿ ಬೆಳೆಯಲಿ ಎಂದು ಹಾರೈಸುತ್ತೇನೆ ಎಂದೂ ಪತ್ರದಲ್ಲಿ ಬರೆದಿದ್ದರು.
ನನ್ನ ಈ ಆಶಯದಂತೆ ಈ ಫಲ ಕಂಡರೆ ನಾನು ತುಂಬ ಸಂತೋಷಪಡುತ್ತೇನೆ. ಆದರೆ ಯುದ್ಧದ ಮನೋಪರಿಣಾಮದಿಂದ ಹೊರಬಾರಲಾಗದಿದ್ದರೆ ಅದಕ್ಕೆ ನನ್ನ ನೋವಿದೆ ಎಂಬ ಮಾತುಗಳು ಈ ಪತ್ರದಲ್ಲಿದೆ.
ಎರಡನೇ ವಿಶ್ವಯುದ್ಧದ ವಸ್ತುಸಂಗ್ರಹಾಲಯ ಹೊಂದಿರುವ ಅಮೆರಿಕ ಮೂಲದ ಕೆನ್ನೆತ್ ರೆಂಡೆಲ್ 8,000 ಪೌಂಡ್ ಕೊಟ್ಟು ಈ ಪತ್ರವನ್ನು ಖರೀದಿಸಿದರು. ಅವರು 50,000 ಪೌಂಡ್‌ವರೆಗೂ ಹಣ ಕೊಟ್ಟು ಖರೀದಿಸಲು ತಯಾರಿದ್ದರು ಎನ್ನಲಾಗಿದೆ.
ಡೆಲ್ಮರ್ 20- 30ರ ದಶಕದಲ್ಲಿ ಪ್ರಖ್ಯಾತಿ ಪಡೆದ ಪತ್ರಕರ್ತರಾಗಿದ್ದರು. ಹಿಟ್ಲರ್ ಅವರ ಸಂದರ್ಶನ ಮಾಡಿದ ಮೊದಲ ಬ್ರಿಟೀಶ್ ಪತ್ರಕರ್ತ ಎಂಬ ಹೆಗ್ಗಳಿಕೆಯೂ ಇವರಿಗಿದೆ.